ನೈಸ್ ದಾಳಿ : ಭದ್ರತಾ ವರದಿ ತಿರುಚಲು ಫ್ರೆಂಚ್ ಗೃಹ ಸಚಿವಾಲಯದ ಒತ್ತಡ
ಪೊಲೀಸ್ ಅಧಿಕಾರಿಣಿ ಆರೋಪ

ಪ್ಯಾರಿಸ್,ಜು.26: ನೀಸ್ ಭಯೋತ್ಪಾದಕ ದಾಳಿ ಘಟನೆಯಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿ ತಾನು ಸಲ್ಲಿಸಲಿರುವ ವರದಿಯಲ್ಲಿ ತಿದ್ದುಪಡಿ ಮಾಡುವಂತೆ ಪ್ಯಾರಿಸ್ ಗೃಹ ಸಚಿವಾಲಯವು ತನಗೆ ಕಿರುಕುಳ ನೀಡಿದ್ದಾಗಿ, ಹಿರಿಯ ಫ್ರೆಂಚ್ ಪೊಲೀಸ್ ಅಧಿಕಾರಿಣಿಯೊಬ್ಬರು ಸೋಮವಾರ ಆಪಾದಿಸಿದ್ದಾರೆ.
ನೀಸ್ ನಗರದಲ್ಲಿ ಸುಡುಮದ್ದು ಪ್ರದರ್ಶನದ ವೇಳೆ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಸ್ಥಳೀಯ ಹಾಗೂ ರಾಷ್ಟ್ರೀಯ ಪೊಲೀಸರು ಉಪಸ್ಥಿತರಿದ್ದರೆಂದು ವರದಿಯಲ್ಲಿ ಉಲ್ಲೇಖಿಸುವಂತೆ ಪೊಲೀಸ್ ಅಧಿಕಾರಿಯೊಬ್ಬರು ತನಗೆ ‘ಒಂದು ತಾಸಿಗೂ ಹೆಚ್ಚು ಸಮಯ ಕಿರುಕುಳ ನೀಡಿದ್ದರು’ ಎಂದು ನೀಸ್‌ನಲ್ಲಿ ಸಿಸಿಟಿವಿ ನಿಯಂತ್ರಣ ಕೊಠಡಿಯ ಉಸ್ತುವಾರಿ ಹೊಂದಿರುವ ಸಾಂಡ್ರಾ ಬರ್ಟಿನ್ ಹೇಳಿದ್ದಾರೆ.
ಆದರೆ ಸಿಸಿಟಿವಿಯಲ್ಲಿ ದಾಖಲಾದ ವಿಡಿಯೋದಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಸ್ಥಳದಲ್ಲಿದ್ದುದು ಕಂಡುಬಂದಿಲ್ಲವೆಂದು ಆಕೆ ತಿಳಿಸಿದ್ದಾರೆ. ತನ್ನನ್ನು ಭೇಟಿಯಾದ ಪೊಲೀಸ್ ಅಧಿಕಾರಿಯು,ಸಿಸಿಟಿವಿ ಪರದೆಯಲ್ಲಿ ತನಗೆ ಕಾಣಸಿಗದ ರಾಷ್ಟ್ರೀಯ ಪೊಲೀಸರು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಉಪಸ್ಥಿತರಿದ್ದರೆಂಬುದಾಗಿ ವರದಿಯಲ್ಲಿ ನಮೂದಿಸಬೇಕೆಂದು ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಸಾಂಡ್ರಾ ಬರ್ಟಿನ್ ತಿಳಿಸಿದ್ದಾರೆ.
ಗೃಹ ಸಚಿವಾಲಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಕೂಡಾ ತಿದ್ದುಪಡಿ ಮಾಡಲಾದ ವರದಿಯನ್ನು ತನಗೆ ಇಮೇಲ್ ಮಾಡುವಂತೆ ಸೂಚಿಸಿದ್ದರೆಂದು ಆಕೆ ತಿಳಿಸಿದ್ದಾರೆ.
ಆದರೆ ಸಾಂಡ್ರಾ ಅವರ ಆರೋಪವನ್ನು ಫ್ರಾನ್ಸ್ ಗೃಹ ಸಚಿವ ಬರ್ನಾರ್ಡ್ ಕ್ಯಾಝಾನೆವ್ ತಿರಸ್ಕರಿಸಿದ್ದಾರೆ ಹಾಗೂ ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಅವರು ಹೇಳಿದ್ದಾರೆ.
‘‘ ಮ್ಯಾಡಂ ಸಾಂಡ್ರಾ ಬರ್ಟನ್ ತನಿಖಾಧಿಕಾರಿಗಳಿಗೆ ತಾನು ಆರೋಪ ಮಾಡಿರುವ ವ್ಯಕ್ತಿಗಳ ಹುದ್ದೆ ಹಾಗೂ ಹೆಸರುಗಳನ್ನು ಮತ್ತು ಇಮೇಲ್ ಪತ್ರದ ವಿವರಗಳನ್ನು ನೀಡಿದರೆ ಚೆನ್ನಾಗಿತ್ತು’’ ಎಂದು ಅವರು ಹೇಳಿಕೆಯೊಂದರಲ್ಲಿ ವ್ಯಂಗ್ಯವಾಡಿದ್ದಾರೆ.
ಜುಲೈ 14ರಂದು ಫ್ರಾನ್ಸ್‌ನ ನೀಸ್ ನಗರದಲ್ಲಿ ಸುಡುಮದ್ದು ಪ್ರದರ್ಶನದ ವೇಳೆ ಶಂಕಿತ ಉಗ್ರನೊಬ್ಬನು ಜನಸಂದಣಿಯ ಮೇಲೆ ಟ್ರಕ್ ಹರಿಸಿದ್ದರಿಂದ 84 ಮಂದಿ ಸಾವನ್ನಪ್ಪಿದ್ದರು ಹಾಗೂ 303 ಮಂದಿ ಗಾಯಗೊಂಡಿದ್ದರು.







