ನರಸಿಂಗ್ ಯಾದವ್ ರಿಯೋ ಕನಸು ಬಹುತೇಕ ಅಂತ್ಯ: ಗೋಯಲ್

ಹೊಸದಿಲ್ಲಿ, ಜು.25: ನರಸಿಂಗ್ ಯಾದವ್ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಬಹುತೇಕವಾಗಿ ಅಂತ್ಯವಾಗಿದೆ. ಆದಾಗ್ಯೂ ಕುಸ್ತಿಪಟುವಿಗೆ ಕಳಂಕದಿಂದ ಪಾರಾಗಲು ಎಲ್ಲ ರೀತಿಯ ಅವಕಾಶ ನೀಡಲಾಗುವುದು ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದಾರೆ.
ಹಿರಿಯ ಕುಸ್ತಿಪಟು ಸುಶೀಲ್‌ಕುಮಾರ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ನರಸಿಂಗ್ ಯಾದವ್ ರವಿವಾರ ನಾಡಾ ನಡೆಸಿದ್ದ ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾಗಿದ್ದರು.
ವಾಡಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ನರಸಿಂಗ್ ಯಾದವ್‌ರ ಡೋಪ್ ಪ್ರಕರಣವನ್ನು ಅಂತಾರಾಷ್ಟ್ರೀಯ ನಿಯಮದಡಿ ನಿಭಾಯಿಸಬೇಕಾಗುತ್ತದೆ ಎಂದು ಗೋಯಲ್ ಸ್ಪಷ್ಟಪಡಿಸಿದರು.
‘‘ಸ್ವಚ್ಛ ಕ್ರೀಡೆ ಹಾಗೂ ಡೋಪಿಂಗ್ ಪರೀಕ್ಷೆಯ ಉತ್ತೇಜನಕ್ಕಾಗಿ ವಾಡಾ ನೀತಿಸಂಹಿತೆಯಿಂದ ಸ್ಥಾಪಿಸಲ್ಪಟ್ಟ ಸ್ವತಂತ್ರ ಸಂಸ್ಥೆ ರಾಷ್ಟ್ರೀಯ ಉದ್ದೀನಾ ತಡೆ ಘಟಕ(ನಾಡಾ). ನರಸಿಂಗ್ ಪ್ರಕರಣದಲ್ಲೂ ವಾಡಾ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕಾಗುತ್ತದೆ. ನಾವು ವಾಡಾ ನೀತಿಸಂಹಿತೆಗೆ ಬದ್ಧವಾಗಿದ್ದೇವೆ’’ ಎಂದು ಜು.31 ರಂದು ನಡೆಯಲಿರುವ ರನ್ ಫೋರ್ ಒಲಿಂಪಿಕ್ಸ್ ಕಾರ್ಯಕ್ರಮವನ್ನು ಘೋಷಿಸಿದ ಬಳಿಕ ಗೋಯಲ್ ಮಾತನಾಡುತ್ತಿದ್ದರು.
ನರಸಿಂಗ್ ಅವರು ‘ಎ’ ಹಾಗೂ ‘ಬಿ’ ಮಾದರಿ ಪಾಸಿಟಿವ್ ಆಗಿದೆ. ಅವರನ್ನು ತಾತ್ಕಾಲಿಕ ಅಮಾನತುಗೊಳಿಸಲಾಗಿದೆ. ಇದೀಗ ಭಾರತದ 119 ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ನರಸಿಂಗ್‌ಗೆ ಸಮರ್ಥಿಸಿಕೊಳ್ಳಲು ಎಲ್ಲ ಅವಕಾಶ ನೀಡಲಾಗುತ್ತದೆ. ನಿಯಮದಲ್ಲಿ ನ್ಯಾಯವಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದಕ್ಕಿಂತ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎಂದು ಗೋಯಲ್ ತಿಳಿಸಿದರು.
ನರಸಿಂಗ್ ಬೇಡಿಕೆಯಂತೆ ಡೋಪಿಂಗ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಾಗುವುದೇ ಎಂದು ಕೇಳಿದಾಗ, ‘‘ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ. ನಾವು ಏನೂ ಮಾಡಲು ಸಾಧ್ಯವಿಲ್ಲ. ನಾಡಾ ಎಲ್ಲ ಪ್ರಕರಣವನ್ನು ನಿಭಾಯಿಸಲಿದೆ ಎಂದರು.







