ಶೇ 10ಕ್ಕಿಂತ ಹೆಚ್ಚು ವೇತನ ಹೆಚ್ಚಳ ಅಸಾಧ್ಯ : ಸಿದ್ದರಾಮಯ್ಯ

ಬೆಂಗಳೂರು, ಜು.26: ಈಗಾಗಲೇ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ವೇತನವನ್ನು ಶೇ.10 ಕ್ಕಿಂತ ಹೆಚ್ಚು ಏರಿಸಲು ಸಾಧ್ಯವಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದು ನಿಜ. ಆದರೆ ನೌಕರರ ಬೇಡಿಕೆಯನ್ನು ಈಡೇರಿಸುವ ಸ್ಥಿತಿಯಲ್ಲಿ ಸರಕಾರ ಇಲ್ಲ. ಸಾರಿಗೆ ನಿಗಮದ ಸಾಮರ್ಥ್ಯ ಏನೆಂದು ನೌಕರರಿಗೆ ಗೊತ್ತು. ಅದೇ ರೀತಿ ಶೇ 35ರಷ್ಟು ವೇತನ ಏರಿಸಲು ಅಸಾಧ್ಯ ಎನ್ನುವುದು ಗೊತ್ತಿದೆ. ಈಗಿರುವ ವೇತನವನ್ನು ಶೇ 8ರಿಂದ 10ರಷ್ಟು ಏರಿಸಲಾಗಿದೆ. ಇನ್ನು ವೇತನ ಹೆಚ್ಚಳ ಅಸಾಧ್ಯ. ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸರಕಾರ ಮಾತುಕತೆಗೆ ತಯಾರಿದೆ. ಸರಕಾರದೊಂದಿಗೆ ನೌಕರರು ಮಾತುಕತೆಗೆ ಬರಬೇಕು ಎಂದು ಹೇಳಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಎಸ್ಮಾ ಜಾರಿ ಮಾಡುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Next Story





