ತನ್ನ ಮಗಳಿಂದಾಗಿ 32 ವರ್ಷಗಳ ಬಳಿಕ ಪ್ರಿಯಕರನನ್ನು ವರಿಸಿದ ಐವತ್ತರ ಮಹಿಳೆ!

ಕೊಲ್ಲಂ, ಜು.26: ಕೇರಳದ ಕೊಲ್ಲಂ ಜಿಲ್ಲೆಯ ಯುವತಿ ಆತಿರಾ ದಾತನ್ ಅತೀವ ಸಂತೋಷದಿಂದಿದ್ದಾಳೆ. ಆಕೆಯ ಸಂತಸದ ಹಿಂದೆ ಒಂದು ಕಾರಣವೂ ಇದೆ. ಅದು ಅಂತಿಂಥ ಕಾರಣವಲ್ಲ. ಆಕೆ ಅಪರೂಪದ ಕಾರ್ಯವೊಂದನ್ನು ಸಾಧಿಸಿದ್ದಾಳೆ. ಐವತ್ತರ ಹರೆಯದ ತನ್ನ ತಾಯಿಗೂ ಆಕೆಯ 68 ವರ್ಷದ ಪ್ರಿಯಕರನಿಗೂ ವಿವಾಹ ಮಾಡಿಸಿದ ಧನ್ಯತೆಯ ಭಾವ ಆಕೆಗಿದೆ. ಅವರಿಬ್ಬರೂ 32 ವರ್ಷಗಳ ಹಿಂದೆ ಬೇರ್ಪಟ್ಟಿದ್ದರು.
ತನ್ನ ತಾಯಿಯ ಜೀವನದ ದುರಂತ ಕಥೆಯನ್ನು ಹಾಗೂ ಆಕೆಯ ಈಗಿನ ಸಂತಸದ ಕ್ಷಣಗಳನ್ನು ಆತಿರಾ ತನ್ನ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಬಿಚ್ಚಿಟ್ಟಿದ್ದಾಳೆ. ಆತಿರಾಳ ತಾಯಿ ಅನಿತಾ ಚೆಂಬುವಿಲಯಿಲ್ ಕೊಲ್ಲಂ ಜಿಲ್ಲೆಯ ಓಚಿರಾ ಗ್ರಾಮದವಳು. ಆಕೆ 10ನೆ ತರಗತಿಯಲ್ಲಿದ್ದಾಗ ಆಕೆಗೆ ಸ್ಥಳಿಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿದ್ದ ಜಿ.ವಿಕ್ರಮನ್ ಎಂಬವರೊಂದಿಗೆ ಪ್ರೇಮಾಂಕುರವಾಗಿತ್ತು. ಆದರೆ ಸೇನೆಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿದ್ದ ಆಕೆಯ ತಂದೆ ಅವರಿಬ್ಬರ ಸಂಬಂಧವನ್ನು ಒಪ್ಪಲಿಲ್ಲ. ತನ್ನ ಮಗಳು ಶಿಕ್ಷಕನೊಂದಿಗೆ ಅದು ಕೂಡ ಎಡಪಂಥೀಯ ನಾಯಕನಾಗಿದ್ದವನೊಂದಿಗೆ ವಿವಾಹವಾಗುವುದು ಅವರಿಗೆ ಸುತರಾಂ ಇಷ್ಟವಿರಲಿಲ್ಲ.
ಅವರಿಬ್ಬರೂ ಸಂಬಂಧ ಮುಂದುವರಿಸಿದರೆ ವಿಕ್ರಮನ್‌ರನ್ನು ಸಾಯಿಸುವುದಾಗಿಯೂ ಅನಿತಾಳ ತಂದೆ ಬೆದರಿಕೆಯೊಡ್ಡಿದರು. ಕೊನೆಗೆ ವಿಕ್ರಮನ್ ತನ್ನ ಉದ್ಯೋಗ ತೊರೆದು ಅದೇ ಜಿಲ್ಲೆಯ ಚವರಾಗೆ ತಮ್ಮ ವಾಸ ಬದಲಾಯಿಸಿದರು. ಇತ್ತ ಅನಿತಾಳ ತಂದೆ ಆಕೆಗೆ ಬೇರೊಬ್ಬನೊಂದಿಗೆ ವಿವಾಹ ಮಾಡಿ ಕೊಟ್ಟರು. ಆದರೆ ಅವರ ವೈವಾಹಿಕ ಜೀವನ ಸಂತೋಷಕರವಾಗಿರಲಿಲ್ಲ. ಅನಿತಾಳ ಗಂಡ ತನ್ನಿಬ್ಬರು ಹೆಣ್ಣು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರೂ ಕುಡುಕನಾಗಿದ್ದ. ಆತಿರಾ ಎಂಟು ವರ್ಷದವಳಿದ್ದಾಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದ.
ಜೀವನದ ಎಲ್ಲಾ ಕಷ್ಟಗಳ ನಡುವೆ ಅನಿತಾ ತನ್ನಿಬ್ಬರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಿದರು. ಆತಿರಾ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಒಮ್ಮೆ ಆಕೆಯ ತಾಯಿ ತನ್ನ ಪ್ರೇಮ ಕಥೆಯನ್ನು ಮಗಳ ಮುಂದೆ ಬಿಚ್ಚಿಟ್ಟಿದ್ದಳು.
ಈ ಕಥೆಯನ್ನು ಕೇಳಿದ ಆತಿರಾಳಿಗೆ ಅವರಿಬ್ಬರನ್ನೂ ಹೇಗಾದರೂ ಒಂದುಗೂಡಿಸಬೇಕೆಂಬ ಛಲ ಹುಟ್ಟಿತು. ಈ ಸಂದರ್ಭ ತನ್ನ ನಿವೃತ್ತ ಜೀವನ ನಡೆಸಲು ಮತ್ತೆ ಒಚಿರಾಗೆ ಬಂದಿದ್ದ ವಿಕ್ರಮನ್ ಪಕ್ಷದ ವಿನಂತಿ ಮೇರೆಗೆ ಸ್ಥಳೀಯ ಪಂಚಾಯತ್ ಚುನಾವಣೆ ಸ್ಪರ್ಧಿಸಿ ವಾರ್ಡ್ ಸದಸ್ಯರಾಗಿ ಬಿಟ್ಟರು. ಆತಿರಾಳಿಗೆ ಅವರ ಬಗ್ಗೆ ಮಾಹಿತಿ ಸಿಕ್ಕಿ ಆಕೆ ಅವರನ್ನು ಭೇಟಿಯಾಗಿ ತನ್ನ ಆಸೆಯನ್ನು ವಿವರಿಸಿದಳು.
ತನ್ನ ತಾಯಿ ಹಾಗೂ ವಿಕ್ರಮನ್ ಮದುವೆ ಆದಷ್ಟು ಬೇಗ ನಡೆಸಬೇಕೆಂದು ಆತಿರಾ ಬಯಸಿದ್ದಳಾದರೂ, ಆತಿರಾ ವಿವಾಹವಾಗುವ ತನಕ ಅವರಿಬ್ಬರು ಕಾಯಲು ನಿರ್ಧರಿಸಿದರು. ಅಂತೆಯೇ ಎರಡು ತಿಂಗಳ ಹಿಂದೆ ಆತಿರಾಳ ವಿವಾಹವಾದ ನಂತರ ತನ್ನ ಕೆಲ ಹತ್ತಿರದ ಸಂಬಂಧಿಕರು ಹಾಗೂ ಸ್ನೇಹಿತರ ಸಹಕಾರದಿಂದ ಆತಿರಾ ತನ್ನ ತಾಯಿ ಹಾಗೂ ವಿಕ್ರಮನ್‌ರ ವಿವಾಹ ನೆರವೇರಿಸಿದ್ದಾರೆ.







