ಕಾಸರಗೋಡು: ವಿದೇಶಕ್ಕೆ ಗಾಂಜಾ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಗಳಿಬ್ಬರ ಬಂಧನ
ಬಂಧಿತರಿಂದ 3.5 ಕೆ.ಜಿ. ಗಾಂಜಾ ವಶ

ಕಾಸರಗೋಡು, ಜು.26: ಮೂರೂವರೆ ಕಿಲೋ ಗ್ರಾಂ ಗಾಂಜಾ ಸಹಿತ ಇಬ್ಬರನ್ನು ಕೇರಳ ನಾರ್ಕೋಟಿಕ್ ಸೆಲ್ ಅಧಿಕಾರಿಗಳು ಬಂಧಿಸಿದ್ದಾರೆ. ಸಾಗಾಟಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರನ್ನು ಬೇಡಡ್ಕ ತಾಲಕುನ್ನುವಿನ ಬಿ.ಎಚ್. ಅಜೀಝ್ (29) ಮತ್ತು ಬೇಕಲದ ಇಬ್ರಾಹೀಂ ಖಲೀಲ್ (29) ಎಂದು ಗುರುತಿಸಲಾಗಿದೆ. ಕಾರಲ್ಲಿದ್ದ ಬೆಂಡಿಚ್ಚಾಲ್ನ ಉಮ್ಮರ್ ಫಾರೂಕ್ (20) ಎಂಬಾತ ಪರಾರಿಯಾಗಿದ್ದಾನೆ.
ಖಚಿತ ಮಾಹಿತಿಯಂತೆ ಕಾಸರಗೋಡು ಠಾಣಾ ಸಬ್ ಇನ್‌ಸ್ಪೆಕ್ಟರ್ ರಂಜಿತ್ ರವೀಂದ್ರನ್, ವಿದ್ಯಾನಗರ ಠಾಣಾ ಎಸೈ ಪಿ.ಅಜಿತ್ ಕುಮಾರ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಗಾಂಜಾವನ್ನು ವಿದೇಶಕ್ಕೆ ಸಾಗಿಸಲು ಯತ್ನಿಸಲಾಗಿತ್ತು ಎನ್ನಲಾಗಿದೆ.
ಮಂಗಳೂರು ವಿಮಾನ ನಿಲ್ದಾಣ ಮೂಲಕ ಮಂಗಳವಾರ ರಾತ್ರಿ ತೆರಳುವ ಪ್ರಯಾಣಿಕನೋರ್ವನಿಗೆ ಒಪ್ಪಿಸಲು ಇದನ್ನು ಕೊಂಡೊಯ್ಯಲಾಗುತ್ತಿತ್ತು ಎಂಬ ಅಂಶವು ತನಿಖೆಯಿಂದ ತಿಳಿದುಬಂದಿದೆ.
Next Story





