ಯಾವುದೇ ಕ್ಷೇತ್ರದ ಪ್ರಾಮಾಣಿಕ ಸೇವೆ ದೇಶ ಸೇವೆ: ಎಸ್ಪಿ ಭೂಷಣ್ ಬೊರಸೆ
ನಿವೃತ್ತ ಯೋಧರ ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ

ಮಂಗಳೂರು,ಜು.26: ಸೈನ್ಯಕ್ಕೆ ಸೇರ್ಪಡೆಗೊಂಡು ಆ ಮೂಲಕ ಸೇವೆ ಮಾಡುವುದು ದೇಶ ಸೇವೆಯ ಒಂದು ಉತ್ಕೃಷ್ಟ ಮಾದರಿಯಾಗಿದ್ದರೆ, ತಾನು ದುಡಿಯುವ ಯಾವುದೇ ಕ್ಷೇತ್ರದಲ್ಲಿಯೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಕೂಡಾ ದೇಶ ಸೇವೆಯೇ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್ ರಾವ್ ಬೊರಸೆ ಹೇಳಿದರು.
ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘದ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಮಂಗಳೂರು, ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ‘ದೇಶಪ್ರೇಮ ಮತ್ತು ರಾಷ್ಟ್ರೀಯ ಹೆಮ್ಮೆ’ ಎಂಬ ವಿಷಯದ ಬಗ್ಗೆ ನಡೆದ ಅಂತರ್ ಶಾಲಾ ಕಾರ್ಯಾಗಾರದಲ್ಲಿ ಅವರು ದಿಕ್ಸೂಚಿ ಭಾಷಣ ನೀಡಿದರು.
ಇಂದು ಪೋಷಕರ ಜತೆ ಮಕ್ಕಳಿಗೂ ತಾನು ವೈದ್ಯ, ಇಂಜನಿಯರ್ ಆಗಬೇಕೆಂಬ ಗುರಿ ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೂಲ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಬೇಕು. ಸಂಶೋಧನೆಯಲ್ಲಿ ತೊಡಗಬೇಕು. ಈ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘ ನಿಕಟಪೂರ್ವ ಅಧ್ಯಕ್ಷ ಕರ್ನಲ್ ಎನ್.ಎಸ್. ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗದವರು ದೇಶವನ್ನು, ಭೂಮಿಯನ್ನು ಪ್ರೀತಿಸುವ ಮೂಲಕ ನಮ್ಮ ನೆಲ, ಜಲ, ಪ್ರಾಕೃತಿಕ ಸಂಪನ್ಮೂಲ ರಕ್ಷಿಸುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಬಹುದು ಎಂದರು.
ಲಯನ್ಸ್ ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಸೈನಿಕರಾದ ಶ್ರೀಕಾಂತ್ ಶೆಟ್ಟಿ, ವಸಂತ್ ಕಾಯರ್‌ಮಾರ್, ಜೋಕಿಮ್ ಡಿಸೋಜ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘ ಅಧ್ಯಕ್ಷ ವಿಕ್ರಮ್ ದತ್ತಾ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಐರನ್, ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಉಮೇಶ್ ಪ್ರಭು, ಅರವಿಂದ ಶೆಣೈ, ಸತೀಶ್ ಪೈ, ಪ್ರತಿಭಾ, ಅನಿಮಾ ಶೆಟ್ಟಿ ಉಪಸ್ಥಿತರಿದ್ದರು.
ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್ ಸ್ವಾಗತಿಸಿದರು. ಬಳಿಕ ರಸಪ್ರಶ್ನೆ ಸ್ಪರ್ಧೆ, ವಿವಿಧ ಯುದ್ಧಗಳ ತುಣುಕುಗಳ ವೀಡಿಯೊ ಪ್ರದರ್ಶನ ನಡೆಯಿತು.







