ದ.ಕ. ಮರಳು ಗಣಿಗಾರಿಕೆ ನೀತಿ ಸರಳೀಕರಣಕ್ಕೆ ಆಗ್ರಹ
ದ.ಕ. ಜಿಲ್ಲಾ ಮರಳು ತೆಗೆಯುವ ಮಾಲಕರ- ಕಾರ್ಮಿಕರ ಒಕ್ಕೂಟ ಅಸ್ತಿತಕ್ಕೆ

ಮಂಗಳೂರು, ಜು.26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಿಯಮಗಳನ್ನು ಸರಳಗೊಳಿಸಬೇಕು ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದ.ಕ. ಜಿಲ್ಲಾ ಮರಳು ತೆಗೆಯುವ ಮಾಲಕರು ಹಾಗೂ ಕಾರ್ಮಿಕ ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಬಿ., ಮಾನವ ಶ್ರಮದಿಂದ ನದಿಯಲ್ಲಿ ಸಂಗ್ರಹಿಸಿ ನದಿಯ ದಡದಲ್ಲಿ ಸಂಗ್ರಹಿಸುವ ಮರಳನ್ನು ಯಾಂತ್ರೀಕೃತವಾಗಿ ಲೋಡ್ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಎಂ ಸ್ಯಾಂಡ್ ನಿಷೇಧಿಸಬೇಕು. ಮರದ ದೋಣಿ ಬದಲು ಕಬ್ಬಿಣ, ಫೈಬರ್ ದೋಣಿ ಬಳಸಲು ಅವಕಾಶ ನೀಡಬೇಕು. ಎರಡು ತಿಂಗಳ ಮರಳು ಗಣಿಗಾರಿಕೆ ನಿಷೇಧವನ್ನು ಮರು ಪರಿಶೀಲಿಸಿ ರದ್ದು ಮಾಡಬೇಕು. ಜಲ ಜೀವರಾಶಿಗಳ ಸಂತತಿ ಉತ್ಪನ್ನ ಹೊರತುಪಡಿಸಿ ಮರಳುಗಾರಿಕೆಗೆ ಅವಕಾಶ ನೀಡಬೇಕು. ನೆರೆಯ ಸಮಯದಲ್ಲಿ ಮಾಲಕರು, ಕಾರ್ಮಿಕರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳಕುರಿತು ಜಿಲ್ಲಾ ಉಸ್ತುವಾರಿ ಸಮಿತಿಗೆ ಮನವಿಯನ್ನು ನೀಡುತ್ತಿದ್ದು, 14 ದಿನಗಳ ಒಳಗೆ ಜಂಟಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.
ಕಬ್ಬಿಣದ ದೋಣಿಯಿಂದ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲವಾಗಿದ್ದು ಅದಕ್ಕೆ ಅವಕಾಶ ನೀಡಬೇಕು. ಯಾವ ಸಂಘಟನೆಗಳಿಂದಲೂ ನಮ್ಮ ಸಂಕಷ್ಟಗಳಿಗೆ ಸಹಾಯವಾಗುತ್ತಿಲ್ಲ ಎಂಬ ಕಾರಣಕ್ಕೆ ನೂತನ ಒಕ್ಕೂಟವನ್ನು ತಾವು ರಚಿಸಿಕೊಂಡಿದ್ದು, ಇದರಲ್ಲಿ ಮರಳು ತೆಗೆಯುವವರು 85 ಮಂದಿ ಸದಸ್ಯರಾಗಿದ್ದಾರೆ ಎಂದರು.
ಮರಳು ತೆಗೆಯಲು ಪರವಾನಿಗೆ ಪಡೆದಿರುವ 427 ಮಂದಿಯಲ್ಲಿ ಬಹಳಷ್ಟು ಮಂದಿ ಮರಳು ವ್ಯಾಪಾರ ಮಾಡುವವರಲ್ಲ. ಪರವಾನಿಗೆಯೊಂದಕ್ಕೆ 10,000 ರೂ. ಹೆಚ್ಚುವರಿ ಹಣ ಕೊಟ್ಟು ಪರವಾನಿಗೆಯನ್ನು ಪಡೆದವರಿದ್ದು, ಅರ್ಹ ಕೆಲವರಿಗೆ ಪರವಾನಿಗೆ ನೀಡಲಾಗಿಲ್ಲ ಎಂದೂ ಅವರು ಈ ಸಂದರ್ಭ ಆರೋಪಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಮೆಲ್ವಿನ್ ರೋಚ್, ಕೆ.ಯು. ಮೂಸಬ್ಬ, ಪ್ರಧಾನ ಕಾರ್ಯದರ್ಶಿ ಭರತ್ ತಿಂಗಳಾಯ, ಕಾರ್ಯಕಾರಿ ಮಂಡಳಿ ಸದಸ್ಯರಾದ ಮುಹಮ್ಮದ್ ಶರೀಫ್ ಎಂ.ಎಸ್. ಉಪಸ್ಥಿತರಿದ್ದರು.







