ಸೈನಿಕರ ಸೇವೆಯ ಹುರುಪು ಎಲ್ಲರಿಗೂ ಮಾದರಿ: ಕೆಂಪಲಿಂಗಪ್ಪ
ಕಾರ್ಗಿಲ್ ವಿಜಯ ದಿನಾಚರಣೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
.jpg)
ಸುಳ್ಯ, ಜು.26: ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಸುಳ್ಯದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಮವಸ್ತ್ರ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ದೇಶಸೇವೆಯಲ್ಲಿ ತೊಡಗಿದ ಸೈನಿಕರು ಪುಣ್ಯಶಾಲಿಗಳು. ಸೈನಿಕರ ಸೇವೆಯ ಹುರುಪು ಎಲ್ಲರಿಗೂ ಮಾದರಿಯಾಗಲಿ ಎಂದವರು ಹೇಳಿದರು.
ಸಂಘದ ಕಾರ್ಯದರ್ಶಿ ಮೋನಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಸೈನಿಕರು ಸಾಕಷ್ಟು ತರಬೇತಿ ಪಡೆದವರು. ಗಟ್ಟಿಮುಟ್ಟಾಗಿರುವವರು. ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಅವರಿಗೆ ಇದೆ. ವಿಶ್ವವನ್ನೇ ಗೆಲ್ಲುವ ಸಾಮರ್ಥ್ಯ ಅವರಿಗೆ ಇದೆ. ಆದರೆ ದೇಶದಲ್ಲಿರುವ ಭಯೋತ್ಪಾದನೆ, ಭ್ರಷ್ಟಾಚಾರಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.
ಮಾಜಿ ಸೈನಿಕ, ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಒ.ಪಿ.ಜತ್ತಪ್ಪ ಮಾತನಾಡಿ, 74 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 527 ಸೈನಿಕರು ಹುತಾತ್ಮರಾಗಿದ್ದಾರೆ. ಇದರಲ್ಲಿ ಕರ್ನಾಟಕದ 14 ಮಂದಿ ಸೇರಿದ್ದಾರೆ. 1,363 ಸೈನಿಕರು ಅಂಗವಿಕಲಾಗಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಗಿಲ್ ಯುದ್ಧ ಸಂದಭರ್ ಜಿಲ್ಲೆಯ ಮಾಜಿ ಸೈನಿಕರು 50 ಸಾವಿರ ರೂಪಾಯಿಯನ್ನು ಆಗಿನ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿದ್ದನ್ನು ಅವರು ನೆನಪಿಸಿಕೊಂಡರು.
ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ರಂಗಯ್ಯ ವೇದಿಕೆಯಲ್ಲಿದ್ದರು.







