ಕೆಎಸ್ಸಾರ್ಟಿಸಿ ನೌಕರರ ಬೇಡಿಕೆ ಈಡೇರಿದರೆ ಮುಷ್ಕರ ಹಿಂದಕ್ಕೆ

ಮಂಗಳೂರು, ಜು. 26: ಕೆಎಸ್ಸಾರ್ಟಿಸಿ ನೌಕರರು ಸರಕಾರದ ಮುಂದಿಟ್ಟಿರುವ ಬೇಡಿಕೆಗಳು ಈಡೇರಿದರೆ, ಸಾರಿಗೆ ಬಂದ್ ಮುಷ್ಕರವನ್ನು ಕೈಬಿಡುವುದಾಗಿ ತಿಳಿಸಿರುವ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್‌ನ ಮಂಗಳೂರು ವಿಭಾಗದ ಪ್ರವೀಣ್ ಕುಮಾರ್, ನೌಕರರ ಬೇಡಿಕೆ ಈಡೇರದಿದ್ದರೆ ಮುಷ್ಕರವನ್ನು ಅನಿರ್ದಿಷ್ಟಾವಧಿ ಕಾಲ ಮುಂದುವರಿಸುವುದಾಗಿ ಹೇಳಿದ್ದಾರೆ.
ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ನೌಕರರ ಬೇಡಿಕೆಗಳಿಗೆ ಸಂಬಂಧಿಸಿ ಇಂದು ಸಂಜೆ ಸಚಿವ ಸಂಪುಟ ಸಭೆ ನಡೆದಿದೆ. ಆದರೆ, ಸಚಿವ ಸಂಪುಟ ಸಭೆ ಕೈಗೊಂಡ ತೀರ್ಮಾನದಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಂಗಳವಾರ ಕೆಎಸ್ಸಾರ್ಟಿಸಿ ನೌಕರರ ಸಭೆ ಕರೆದು ಮಾತುಕತೆ ನಡೆಸಲಿದ್ದಾರೆ. ಮಾತುಕತೆ ಸಫಲವಾದರೆ ಮುಷ್ಕರವನ್ನು ಕೈಬಿಡುತ್ತೇವೆ. ಮಾತುಕತೆ ವಿಫಲವಾದರೆ ಮುಷ್ಕರ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಕೆಲವೆಡೆ ಬಸ್ ಸಂಚಾರ ಆರಂಭ: ಹೆಗ್ಡೆ
ಕೆಎಸ್ಸಾರ್ಟಿಸಿ ಮುಷ್ಕರ ಮುಂದುವರಿದ್ದಿರೂ ಮಂಗಳವಾರ ಸಂಜೆ 4 ಗಂಟೆಯ ಬಳಿಕ ಕೆಲವು ರೂಟ್‌ನ ಬಸ್‌ಗಳು ಸಂಚಾರ ಆರಂಭಿಸಿವೆ ಎಂದು ಮಂಗಳೂರು ವಿಭಾಗದ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿನಾಯಕ ಹೆಗ್ಡೆ ತಿಳಿಸಿದ್ದಾರೆ.
ಕೆಲವು ಬಸ್ಸು ಚಾಲಕರು ಇಂದು ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅದರಂತೆ ಮಂಗಳೂರು-ಧರ್ಮಸ್ಥಳ, ಮಂಗಳೂರು-ಉಡುಪಿ (ವೋಲ್ವೊ), ಮಂಗಳೂರು ಕಾರ್ಕಳ ಪ್ರದೇಶಗಳಿಗೆ ಸಂಚಾರವನ್ನು ಆರಂಭಿಸಲಾಗಿದೆ. ಬುಧವಾರ ಕೆಎಸ್ಸಾರ್ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೆ ಬಸ್ಸುಗಳು ಸಂಚರಿಸಲಿವೆ ಎಂದು ಅವರು ತಿಳಿಸಿದ್ದಾರೆ.
70 ಲಕ್ಷ ರೂ. ನಷ್ಟ
ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ಬಸ್ ನೌಕರರ ಮುಷ್ಕರದಿಂದಾಗಿ ದ.ಕ. ಜಿಲ್ಲೆಯಲ್ಲಿ ದಿನವೊಂದಕ್ಕೆ 35 ಲಕ್ಷ ರೂ. ನಷ್ಟ ಸಂಭವಿಸುತ್ತಿದ್ದು, ಎರಡು ದಿನಗಳ ಮುಷ್ಕರದಿಂದಾಗಿ 70 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಲಿದೆ ಎಂದು ವಿನಾಯಕ ಹೆಗ್ಡೆ ಮಾಹಿತಿ ನೀಡಿದ್ದಾರೆ. ಇಂದು ಸಂಜೆ ನಾಲ್ಕು ಬಸ್ಸುಗಳು ಸಂಚಾರ ಆರಂಭಿಸಿದ್ದು, ಇನ್ನೂ ಕೆಲವು ಬಸ್ಸುಗಳು ಸಂಚಾರ ಆರಂಭಸಲಿವೆ ಎಂದು ಅವರು ತಿಳಿಸಿದ್ದಾರೆ.







