ಬೆಳ್ತಂಗಡಿ: ಬಾವಿಗೆ ಹಾರಿ ಅವಿವಾಹಿತ ಮಹಿಳೆ ಆತ್ಮಹತ್ಯೆ

ಬೆಳ್ತಂಗಡಿ, ಜು.26: ರೆಖ್ಯಾ ಗ್ರಾಮದ ನೇಲ್ಯಡ್ಕ ಪ್ರೌಢಶಾಲಾ ಬಳಿಯ ಎಂಬ್ರಾಂಡಿವಯಿಲಿಲ್ ಮನೆಯ ಅವಿವಾಹಿತ ಮಹಿಳೆ ಶೋಭಾ (46) ತನ್ನ ಮನೆಯ ಎದುರು ಗಡೆ ಇರುವ ಬಾವಿಗೆ ಹಾರಿ ಆತ್ಮಹತ್ಯೆಗೈದ ಪ್ರಕರಣ ಮಂಗಳವಾರದಂದು ಬೆಳಗ್ಗೆ ನಡೆದಿದೆ.
ಪದವೀಧರೆಯಾಗಿದ್ದ ಈಕೆ ತನ್ನ ತಮ್ಮನ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ 10 ವರ್ಷಗಳಿಂದ ಈಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. 15 ದಿನಗಳ ಹಿಂದೆ ಮನೆಯಲ್ಲಿದ್ದ ತಮ್ಮನ ಹೆಂಡತಿಯೂ ಅನಾರೋಗ್ಯ ಪೀಡಿತೆಯಾಗಿ ಆಸ್ಪತ್ರೆಗೆ ದಾಖಲಾದ ಕಾರಣ ಇನ್ನಷ್ಟೂ ಮಾನಸಿಕವಾಗಿ ಜರ್ಝರಿತರಾಗಿದ್ದರು ಎನ್ನಲಾಗಿದೆ.
ಇವರು ತಮ್ಮ ಮನೆ ಸಮೀಪದಲ್ಲೇ ಇರುವ ಸಂಬಂಧಿಕರ ಮನೆಗೆ ರಾತ್ರಿ ಹೊತ್ತು ಮಲಗಲು ತೆರಳುತ್ತಿದ್ದು ಅದೇ ಪ್ರಕಾರ ಸೋಮವಾರವೂ ರಾತ್ರಿ ಅದೇ ಮನೆಗೆ ತೆರಳಿದ್ದರು. ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಗೆ ಸಂಬಂದಿಕರ ಮನೆಯಿಂದ ತನ್ನ ಮನೆಗೆ ಬಂದಾಕೆ ಮನೆಯ ಸಮೀಪವೇ ಇದ್ದ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಪನಿರೀಕ್ಷಕ ಮಾಧವ ಕೂಡ್ಲು ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







