ಎಚ್‌ಐವಿ: ಭಾರತದ ಬೆಂಬಿಡದ ಜಾಗತಿಕ ಭೂತ

ಭಾರತದಲ್ಲಿ ಕಳೆದ ವರ್ಷ 1.96 ಲಕ್ಷ ಹೊಸ ಹ್ಯೂಮನ್ ಇಮ್ಯುನೊ ಡಿಫೀಶಿಯೆನ್ಸಿ ವೈರಸ್ (ಎಚ್‌ಐವಿ) ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಹಾಲಿ ಇರುವ 28.81 ಲಕ್ಷ ಪ್ರಕರಣಗಳಿಗೆ ಇದು ಹೊಸ ಸೇರ್ಪಡೆ.
ವಿಶ್ವಾದ್ಯಂತ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ 388 ಲಕ್ಷ ತಲುಪಿದೆ. 2015ರಲ್ಲಿ ಇದು 376 ಲಕ್ಷದಿಂದ 404 ಲಕ್ಷ ವರೆಗೆ ವ್ಯತ್ಯಯವಾಗುತ್ತಿತ್ತು. ಇದೇ ವೇಳೆ ಎಚ್‌ಐವಿ/ ಏಡ್ಸ್ ಪೀಡಿತರಾಗಿ ಸಾಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. 2005ರಲ್ಲಿ ವಾರ್ಷಿಕ 18 ಲಕ್ಷ ಮಂದಿ ಏಡ್ಸ್‌ನಿಂದ ಸಾಯುತ್ತಿದ್ದರೆ 2015ರಲ್ಲಿ ಈ ಪ್ರಮಾಣ 12 ಲಕ್ಷಕ್ಕೆ ಇಳಿದಿದೆ ಎಂದು ದ ಲ್ಯಾನ್ಸೆಟ್ ಎಚ್‌ಐವಿ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಹೊಸ ವರದಿ ಹೇಳುತ್ತದೆ.
ಭಾರತದಲ್ಲಿ ಈ ಮಾರಕ ರೋಗಕ್ಕೆ ಬಲಿಯಾದವರ ಸಂಖ್ಯೆ 1.3 ಲಕ್ಷ ಇದೆ. ಏಡ್ಸ್‌ರೋಗಕ್ಕೆ ಆ್ಯಂಟಿ ರಿಟ್ರೈವಲ್ ಥೆರಪಿ (ಎಆರ್‌ಟಿ) ಪಡೆಯುತ್ತಿರುವವರ ಸಂಖ್ಯೆ ಶೇ. 25.82ರಷ್ಟಿದೆ. ಜಾಗತಿಕ ಮಟ್ಟದಲ್ಲಿ ಒಟ್ಟು ಏಡ್ಸ್‌ರೋಗಿಗಳ ಪೈಕಿ ಶೇ. 41 ಮಂದಿ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಭಾರತ ಸರಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ 21.17 ಲಕ್ಷ ಹಾಗೂ 2015ರಲ್ಲಿ ಹೊಸದಾಗಿ ಬೆಳಕಿಗೆ ಬಂದ ಪ್ರಕರಣಗಳು 86 ಸಾವಿರ.
‘1980-2015ರ ಅವಧಿಯಲ್ಲಿ ಎಚ್‌ಐವಿ ಪ್ರಕರಣ, ಸ್ಥಿತಿಗತಿ ಹಾಗೂ ಸಾವು: ಜಾಗತಿಕ ಹೊರೆಯ ಅಧ್ಯಯನ- 2015’ ಎಂಬ ವರದಿಯಲ್ಲಿ ಈ ವಿವರಗಳನ್ನು ದಾಖಲಿಸಲಾಗಿದೆ. ದಕ್ಷಿಣ ಆಫ್ರಿಕಾದ ದರ್ಬಾನ್‌ನಲ್ಲಿ ನಡೆದ ಏಡ್ಸ್ ಸಮಾವೇಶದಲ್ಲಿ ಈ ವರದಿ ಬಿಡುಗಡೆಯಾಗಿದೆ. ಜಾಗತಿಕ ಮಟ್ಟದಲ್ಲಿ ಹೊಸ ಪ್ರಕರಣಗಳು ಪತ್ತೆಯಾದ ಗರಿಷ್ಠ ಪ್ರಮಾಣ 1997ರಲ್ಲಿ ವರದಿಯಾಗಿದ್ದು, ಆ ವರ್ಷ 33 ಲಕ್ಷ ಹೊಸ ಪ್ರಕರಣ ಪತ್ತೆಯಾಗಿತ್ತು. 1997ರಿಂದ 2005ರ ಅವಧಿಯಲ್ಲಿ ಕ್ಷಿಪ್ರ ಇಳಿಕೆ ಕಂಡುಬಂದರೂ 2005ರಿಂದೀಚೆಗೆ ಅದು ಸಾಮಾನ್ಯವಾಗಿ 26 ಲಕ್ಷದ ಆಸುಪಾಸಿನಲ್ಲೇ ಇದೆ ಎಂದು ವಿವರಿಸಲಾಗಿದೆ.
‘ಎಚ್‌ಐವಿ/ ಏಡ್ಸ್‌ನ ಮಟ್ಟ ಹಾಗೂ ಪ್ರವೃತ್ತಿ ಬಗ್ಗೆ ಎಲ್ಲ ದೇಶಗಳಲ್ಲಿ ಬಹುಮೂಲಗಳಿಂದ ಸಾಕಷ್ಟು ಮಾಹಿತಿಗಳನ್ನು ದಾಖಲಿಸಿಕೊಂಡಿದ್ದೇವೆ. ಹಲವು ದೇಶಗಳಲ್ಲಿ ಎಚ್‌ಐವಿ/ ಏಡ್ಸ್ ಸಾವಿನ ಪ್ರಮಾಣ ಹಾಗೂ ಹೊಸ ಸೋಂಕು ಕಡಿಮೆಯಾಗುತ್ತಿದ್ದರೂ, ಇತರ ಕೆಲ ದೇಶಗಳಲ್ಲಿ ಇಳಿಕೆ ಪ್ರಮಾಣ ಕುಂಠಿತವಾಗಿದೆ ಅಥವಾ ಕೆಲವೆಡೆ ಅಧಿಕವೂ ಆಗಿದೆ ಎಂದು ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್-2015’ ವರದಿಯಲ್ಲಿ ವಿವರಿಸಲಾಗಿದೆ.
ಎಆರ್‌ಟಿ ಪ್ರಮಾಣ ಹೆಚ್ಚಿಸಿರುವುದು ಮತ್ತು ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವುದನ್ನು ತಡೆಯುವ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಕಳೆದ ಎರಡು ದಶಕಗಳಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಸಾಧಿಸಲಾಗಿದೆ. ಆದರೆ ಕಳೆದ ಒಂದು ದಶಕದಲ್ಲಿ ಹೊಸ ಸೋಂಕನ್ನು ತಡೆಯುವಲ್ಲಿನ ಪ್ರಗತಿ ಕುಂಠಿತವಾಗಿದೆ. ಎಚ್‌ಐವಿ ಸೋಂಕಿತರಿಗೆ ಅಭಿವೃದ್ಧಿ ನೆರವು ನೀಡುವ ಕಾರ್ಯ ನಿಶ್ಚಲ ಸ್ಥಿತಿಗೆ ಬಂದಿದೆ. ಕಡಿಮೆ ಆದಾಯದ ದೇಶಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ನೆರವಿನ ಪ್ರಮಾಣ ನಿಧಾನವಾಗಿ ಹೆಚ್ಚುತ್ತಿದೆ. ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯ 3ನೆ ಗುರಿಯ ಪ್ರಕಾರ, ಎಚ್‌ಐವಿ ನಿಯಂತ್ರಣದ ಸಾಧನೆ ಗುರಿ 90-90-90ನ್ನು ತಲುಪುವುದು ನಿಜವಾಗಿಯೂ ಸವಾಲಿನ ಕೆಲಸ. ಇದನ್ನು ಸಾಧಿಸಬೇಕಾದರೆ ಮುಂದಿನ 15 ವರ್ಷಗಳಲ್ಲಿ ಸರಕಾರಗಳು ಹಾಗೂ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳ ನೆರವು ಅಗತ್ಯ ಎಂದು ವರದಿ ಹೇಳಿದೆ.
ಯುಎನ್‌ಎಐಡಿಎಸ್‌ನ 90-90-90 ಗುರಿಯಲ್ಲಿ, ಎಚ್‌ಐವಿಯಿಂದ ಬದುಕುತ್ತಿರುವ ಶೇ. 90ರಷ್ಟು ಮಂದಿಗೆ ಅವರ ಸ್ಥಿತಿಗತಿ ಬಗ್ಗೆ ಅರಿವು ಮೂಡಿಸುವುದು, ಪತ್ತೆ ಮಾಡಲಾದ ಪ್ರಕರಣಗಳಲ್ಲಿ ಶೇ. 90ರಷ್ಟು ಮಂದಿಗೆ ಎಆರ್‌ಟಿ ಸೌಲಭ್ಯ ನೀಡುವುದು ಹಾಗೂ ಚಿಕಿತ್ಸೆ ಪಡೆದ ಶೇ. 90ರಷ್ಟು ಮಂದಿಯಲ್ಲಿ ವೈರಸ್ ಹೊರೆಯನ್ನು ಹತ್ತಿಕ್ಕುವುದು ಅಂದರೆ ರಕ್ತದಲ್ಲಿ ಎಚ್‌ಐವಿ ಪ್ರಮಾಣವನ್ನು ಕಡಿಮೆ ಮಾಡುವುದು ಸೇರಿದೆ.
ಎಆರ್‌ಟಿ ಚಿಕಿತ್ಸೆಯನ್ನು 1996ರಲ್ಲಿ ಪರಿಚಯಿಸಿರುವುದು ಎಚ್‌ಐವಿ ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ‘‘ವಿಶ್ವಸಂಸ್ಥೆ 1996ರಲ್ಲಿ ಆರಂಭಿಸಿದ ಜಂಟಿ ಎಚ್‌ಐವಿ ತಡೆ ಕಾರ್ಯಕ್ರಮದಲ್ಲಿ ಏಡ್ಸ್ ವಿರುದ್ಧದ ಹೋರಾಟ, ಕ್ಷಯ ಹಾಗೂ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಜಾಗತಿಕ ನಿಧಿಯನ್ನು ನೀಡಿರುವುದು ಹಾಗೂ 2003ರಲ್ಲಿ ಅಮೆರಿಕದ ಅಧ್ಯಕ್ಷರ ತುರ್ತು ಎಚ್‌ಐವಿ ಪರಹಾರ ನಿಧಿ ಯೋಜನೆಗಳು ಈ ಮಾರಕ ಕಾಯಿಲೆ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿವೆ’’ ಎಂದು ವರದಿ ಬಣ್ಣಿಸಿದೆ.
ಕಳೆದ 15 ವರ್ಷಗಳಲ್ಲಿ, ಜಾಗತಿಕ ಸಮುದಾಯವು ಎಚ್‌ಐವಿ ನಿಯಂತ್ರಣಕ್ಕೆ 109.8 ಶತಕೋಟಿ ಡಾಲರ್ ನೆರವನ್ನು ನೀಡಿದೆ. ಇದರ ಪರಿಣಾಮವಾಗಿ ಎಚ್‌ಐವಿ ಸಾವಿನ ಪ್ರಮಾಣ ಎಲ್ಲ ಕಡಿಮೆ ಆದಾಯದ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ 2004ರಿಂದೀಚೆಗೆ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ವರದಿಯ ಮತ್ತಷ್ಟು ಆಳಕ್ಕೆ ಹೋದರೆ, 2015ರಲ್ಲಿ ಬೆಳಕಿಗೆ ಬಂದ ಹೊಸ ಎಚ್‌ಐವಿ ಪ್ರಕರಣಗಳ ಪೈಕಿ 18 ಲಕ್ಷ ಅಂದರೆ ಶೇ. 75.4ರಷ್ಟು ಹೊಸ ಪ್ರಕರಣಗಳು ಆಫ್ರಿಕಾದ ಸಹರಾ ಉಪಖಂಡದಲ್ಲಿ ಪತ್ತೆಯಾಗಿವೆ. ಅದರಲ್ಲೂ ಮುಖ್ಯವಾಗಿ ಈ ಪ್ರದೇಶದ ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಹೊಸ ಪ್ರಕರಣಗಳು ಅತ್ಯಧಿಕ. ದಕ್ಷಿಣ ಏಷ್ಯಾದಲ್ಲಿ ಸುಮಾರು 2.06 ಲಕ್ಷ ಹೊಸ ಪ್ರಕರಣಗಳು ಅಂದರೆ ಶೇ. 8.5ರಷ್ಟು ವರದಿಯಾಗಿದ್ದು, ಆಗ್ನೇಯ ಏಷ್ಯಾದಲ್ಲಿ ಶೇ. 4.7ರಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಪೂರ್ವ ಏಷ್ಯಾದಲ್ಲಿ ಹೊಸ ಎಚ್‌ಐವಿ ಪ್ರಕರಣ ಪ್ರಮಾಣ ಜಾಗತಿಕ ಪ್ರಮಾಣದ ಶೇ. 2.3ರಷ್ಟಿದೆ.
ಹೊಸ ಸೋಂಕಿನ ಪ್ರಕರಣಗಳು ಸಾಮಾನ್ಯವಾಗಿ ಪುರುಷ ಹಾಗೂ ಮಹಿಳೆಯರಲ್ಲಿ ಸಮ ಪ್ರಮಾಣದಲ್ಲಿದೆ. ಎಚ್‌ಐವಿ ಪ್ರಾಬಲ್ಯ ಮತ್ತು ಸಾವಿನ ಪ್ರಮಾಣ ಕೂಡಾ ಆಫ್ರಿಕಾದ ಸಹರಾ ಉಪಖಂಡದಲ್ಲೇ ಅಧಿಕ. 1990-2005ರ ಅವಧಿಗೆ ಹೋಲಿಸಿದರೆ 2015ರ ಎಚ್‌ಐವಿ ಸೋಂಕು ಪ್ರಮಾಣದಲ್ಲಿ ಭಾರಿ ವ್ಯತ್ಯಯ ಕಂಡುಬರುತ್ತದೆ. ಅಧಿಕ ಪ್ರಮಾಣದ ಹೊಸ ಸೋಂಕು ಪ್ರಮಾಣ ದಕ್ಷಿಣ ಆಫ್ರಿಕಾದಲ್ಲಿದ್ದು, ಶೇ. 1ರಷ್ಟು ಮಂದಿ ಬೋತ್ಸುವಾನಾ, ಲೆಸೆಥೊ ಹಾಗೂ ಸ್ವಾಝಿಲ್ಯಾಂಡ್‌ನಲ್ಲಿ ಸೋಂಕಿತರಾಗುತ್ತಿದ್ದಾರೆ. ಆಫ್ರಿಕಾದ ಸಹಾರ ಉಪಖಂಡದಲ್ಲಿ, ಒಂದು ಲಕ್ಷ ಮಂದಿಗೆ 150ಕ್ಕಿಂತ ಹೆಚ್ಚು ಮಂದಿ ಸೋಂಕಿತರಾಗುತ್ತಿದ್ದಾರೆ. ಕಾಂಗೋ ಗಣರಾಜ್ಯವನ್ನು ಹೊರತುಪಡಿಸಿ ನೈಜೀರಿಯಾದಿಂದ ತಾಂಜಾನಿಯಾ ವರೆಗೂ ಇದೇ ಪ್ರವೃತ್ತಿ ಇದೆ. ಕಾಂಗೋದಲ್ಲಿ ಎಚ್‌ಐವಿ ಪೀಡಿತರಾಗುತ್ತಿರುವವರ ಸಂಖ್ಯೆ ಲಕ್ಷಕ್ಕೆ 42 ಆಗಿದ್ದರೆ, ಇಥಿಯೋಪಿಯಾದಲ್ಲಿ ಈ ಪ್ರಮಾಣ 39.4ರಷ್ಟಿದೆ. ಯೂರೋಪ್ ಖಂಡದಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿರುವುದು ರಷ್ಯಾದಿಂದ. ಏಷ್ಯಾದಲ್ಲಿ ಕಾಂಬೋಡಿಯಾದಿಂದ. ಅಮೆರಿಕನ್ ದೇಶಗಳಲ್ಲಿ ಬೆಲೈಝ್, ಗಯಾನಾ ಹಾಗೂ ಹೈಟಿಗಳಿಂದ ಮಾತ್ರ ಲಕ್ಷಕ್ಕೆ 50 ಮಂದಿಗಿಂತ ಹೆಚ್ಚು ಸೋಂಕಿತರಿದ್ದಾರೆ.
ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ಲಭ್ಯತೆ ವ್ಯಾಪಕವಾಗಿರುವ ಕಾರಣ, ಹೊಸ ಪ್ರಕರಣಗಳಿಗೆ ಹೋಲಿಸಿದರೆ, ಏಡ್ಸ್ ಉಳಿದುಕೊಂಡಿರುವ ಪ್ರಮಾಣ ಅಧಿಕ ಸಾಮಾಜಿಕ- ಭೌಗೋಳಿಕ ಸೂಚ್ಯಂಕ ಇರುವ ಬೋಟ್ಸುವಾನಾ, ಲೆಸೆಥೊ, ನಮೀಬಿಯಾ, ಸ್ವಾಝಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯಲ್ಲಿ ಒಟ್ಟು ಜನಸಂಖ್ಯೆಯ ಶೇ. 10ರಷ್ಟಿದೆ. ಸಹಾರ ಉಪಖಂಡದ ಒಂಬತ್ತು ದೇಶಗಳಾದ ಕೇಂದ್ರ ಆಫ್ರಿಕನ್ ರಿಪಬ್ಲಿಕ್, ಕ್ಯಾಮರೂನ್, ಈಕ್ವಟೋರಿಯಲ್ ಗುನಿಯಾ, ಕೀನ್ಯಾ, ಮೊಜಾಂಬಿಕ್, ಮಾಳವಿ, ತಾಂಜಾನಿಯಾ, ಉಗಾಂಡ ಹಾಗೂ ಜಿಂಬಾಬ್ವೆಯಲ್ಲಿ ಏಡ್ಸ್ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ. 2.5ರಷ್ಟಿದೆ. ಸಹಾರ ಉಪಖಂಡದ ಹೊರಗಿನ ಹನ್ನೊಂದು ದೇಶಗಳಾದ ಬಹಾಮಸ್, ಬೆಲೈಝ್, ಬರ್ಮುಡಾ, ಡೊಮಾನಿಕನ್ ರಿಪಬ್ಲಿಕ್, ಗಯಾನ, ಹೈಟಿ, ಕಾಂಬೋಡಿಯಾ, ಪೋರ್ಚ್‌ಗಲ್, ಸುರಿನೇಮ್, ಟ್ರಿನಿಡಾಡ್ ಮತ್ತು ಟೊಬೊಗೊ ಹಾಗೂ ಸೈಂಟ್ ವಿನ್ಸೆಂಟ್‌ನಲ್ಲಿ ಏಡ್ಸ್ ಉಳಿಕೆ ಪ್ರಮಾಣ ಶೇ. 0.5ರಿಂದ 2.5ರ ನಡುವೆ ಇದೆ.
ಹೊಸ ವಾರ್ಷಿಕ ಸೋಂಕಿನ ಅಂದಾಜಿನಲ್ಲಿ ಯುಎನ್‌ಎಐಡಿಎಸ್ 2014ರಲ್ಲಿ, ಜಿಬಿಡಿ-2015ಕ್ಕಿಂತ ಇನ್ನೂ ಕ್ಷಿಪ್ರ ಇಳಿಕೆಯನ್ನು ಅಂದಾಜು ಮಾಡಿತ್ತು. ಜಾಗತಿಕವಾಗಿ ಜಿಬಿಡಿ 2015, 25 ಲಕ್ಷ ಹೊಸ ಸೋಂಕು ಪ್ರಕರಣಗಳನ್ನು 2014ರಲ್ಲಿ ಅಂದಾಜು ಮಾಡಿದ್ದರೆ, ಯುಎನ್‌ಎಐಡಿಎಸ್ ಸುಮಾರು 20 ಲಕ್ಷ ಹೊಸ ಸೋಂಕಿನ ಪ್ರಕರಣಗಳನ್ನು ಅಂದಾಜು ಮಾಡಿತ್ತು. ಆದರೆ 2016ರಲ್ಲಿ ಯುಎನ್‌ಎಐಡಿಎಸ್ 2014ರ ಪ್ರಮಾಣಕ್ಕಿಂತ ಸ್ವಲ್ಪಅಧಿಕ ಹೊಸ ಪ್ರಕರಣಗಳನ್ನು ಅಂದಾಜು ಮಾಡಿದೆ. 2005- 2014ರವರೆಗೆ ಇಳಿಕೆಯಾಗಿರುವ ಹೊಸ ಪ್ರಕರಣಗಳ ಆಧಾರದಲ್ಲಿ 2016ರಲ್ಲಿ 21 ಲಕ್ಷ ಹೊಸ ಪ್ರಕರಣಗಳು ವರದಿಯಾಗುವ ಸಂಭವ ಇದೆ ಎಂದು ಅಂದಾಜು ಮಾಡಿದೆ. ಜಿಬಿಡಿ-2015, ವಾರ್ಷಿಕ ಶೇ. 0.4ರಷ್ಟು ಇಳಿಕೆಯನ್ನು ಅಂದಾಜು ಮಾಡಿದ್ದು, ಯುಎನ್‌ಎಐಡಿಎಸ್, 2014ರ ಬಳಿಕ ವಾರ್ಷಿಕ 3.3 ಶೇ. ದರದಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದೆ.
ಆಫ್ರಿಕಾದ ಸಹಾರ ಉಪಖಂಡದಲ್ಲಿ ಕೇವಲ ಏಳು ದೇಶಗಳಲ್ಲಿ ಮಾತ್ರ ವಾರ್ಷಿಕ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಇಳಿದಿದೆ. ಆ ದೇಶಗಳೆಂದರೆ ಮಡಗಾಸ್ಕರ್, ಕಾಂಗೋ ಗಣರಾಜ್ಯ, ಬುರ್ಕಿನಾ ಫಾಸೊ, ಗುನಿಯಾ- ಬಿಸ್ಸಾವು, ಛಡ್, ರ್ವಾಂಡಾ ಹಾಗೂ ಜಾಂಬಿಯಾ. ಜಿಬಿಡಿ ಅಂದಾಜಿನ ಪ್ರಕಾರ ಈ ದೇಶಗಳಲ್ಲಿ, ಯುಎನ್‌ಎಐಡಿಎಸ್ ಅಂದಾಜಿಗಿಂತಲೂ ಕ್ಷಿಪ್ರವಾಗಿ ಇಲ್ಲಿ ಇಳಿಕೆ ಸಾಧ್ಯತೆ ಇದೆ. ಕೋಟ್ ಡಿಲೊರ್, ಬುರುಂಡಿ, ಎರಿಟ್ರಿಯಾ, ಜಿಂಬಾಬ್ವೆ, ಲೆಸೆಥೊ, ನೈಜೀರಿಯಾ, ಬೋಟ್ಸುವಾನಾ ಹಾಗೂ ಕೀನ್ಯಾದಲ್ಲಿ, ಜಿಬಿಡಿ-2015ರ ಅಂದಾಜಿನ ಪ್ರಕಾರ, ಹೊಸ ಪ್ರಕರಣಗಳು ಹೆಚ್ಚಲಿವೆ. ಆದರೆ ಯುಎನ್‌ಎಐಡಿಎಸ್ ಇಲ್ಲಿ ಇಳಿಕೆಯಾಗುವ ಸಾಧ್ಯತೆಯನ್ನು ಅಂದಾಜಿಸಿದೆ. ಅತ್ಯಧಿಕ ಭಿನ್ನತೆ ಇರುವುದು ಕೀನ್ಯಾದಲ್ಲಿ. ಜಿಬಿಡಿ ಅಂದಾಜಿನ ಪ್ರಕಾರ, 2005ರಲ್ಲಿ ವಾರ್ಷಿಕ 60 ಸಾವಿರ ಹೊಸ ಎಚ್‌ಐವಿ ಪ್ರಕರಣಗಳು ಇಲ್ಲಿ ವರದಿಯಾಗಿದ್ದರೆ, ಈ ಪ್ರಮಾಣ 2014ರಲ್ಲಿ 1.47 ಲಕ್ಷ ಆಗಿದೆ. ಆದರೆ ಯುಎನ್‌ಎಐಡಿಎಸ್, ಈ ದೇಶದಲ್ಲಿ 73 ಸಾವಿರದಿಂದ ವಾರ್ಷಿಕ ಎಚ್‌ಐವಿ ಹೊಸ ಪ್ರಕರಣಗಳ ಪ್ರಮಾಣ ಈ ಅವಧಿಯಲ್ಲಿ 56 ಸಾವಿರಕ್ಕೆ ಇಳಿದಿದೆ.









