ಚೊಚ್ಚಲ ಒಲಿಂಪಿಕ್ ಪದಕದ ನಿರೀಕ್ಷೆಯಲ್ಲಿ ಹೀನಾ ಸಿಧು

ಹೊಸದಿಲ್ಲಿ, ಜು.26: ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಫೈನಲ್-2013ರಲ್ಲಿ ವಿಶ್ವ ದಾಖಲೆಯ ಅಂಕದೊಂದಿಗೆ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದ ಹೀನಾ ಸಿಧು ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದರು. ಶೂಟಿಂಗ್ ವಿಶ್ವಕಪ್‌ನಲ್ಲಿ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದರು.
2012ರಲ್ಲಿ ಲಂಡನ್ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಏರ್‌ಪಿಸ್ತೂಲ್ ವಿಭಾಗದಲ್ಲಿ ಸಿಧು 12ನೆ ಸ್ಥಾನ ಪಡೆದಿದ್ದರು. ಇದು ಹೀನಾರ ಒಲಿಂಪಿಕ್ಸ್‌ನ ಆರಂಭಿಕ ಪಯಣವಾಗಿತ್ತು.
‘‘ಮೊದಲ ಒಲಿಂಪಿಕ್ಸ್‌ನಲ್ಲಿ ನಾನು ಸಾಕಷ್ಟು ಕಲಿತಿರುವೆ. ಆಗ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಒತ್ತಡವಿತ್ತು. ಒತ್ತಡದಿಂದ ನಾವು ಕಲಿಯಬೇಕಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸಾಕಷ್ಟು ಕಲಿತಿರುವೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶವಿದೆ’’ ಎಂದು 27ರ ಹರೆಯದ ಹೀನಾ ಸಿಧು ಹೇಳಿದ್ದಾರೆ.
ಹೀನಾ ಹೊಸದಿಲ್ಲಿಯಲ್ಲಿ ಈ ವರ್ಷಾರಂಭದಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಚಿನ್ನದ ಪದಕವನ್ನು ಜಯಿಸುವುದರೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಆದರೆ, ಆ ಬಳಿಕ ಹೀನಾ ಸಿಧು ಪ್ರದರ್ಶನ ಮಟ್ಟ ಕುಸಿದಿದೆ. ಅವರು ಈ ವರ್ಷ ಒಂದೂ ವಿಶ್ವಕಪ್ ಫೈನಲ್‌ನ್ನು ತಲುಪಿಲ್ಲ.
ಪ್ರತಿಷ್ಠಿತ ಟೂರ್ನಿಗಳಲ್ಲಿ ಒತ್ತಡ ನಿಭಾಯಿಸುವ ಸಾಮರ್ಥ್ಯ ತನಗಿದೆ ಎಂದು ಹೇಳಿರುವ ಸಿಧು,‘‘ ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ತಾಂತ್ರಿಕ ವಿಷಯಗಳತ್ತ ಹೆಚ್ಚು ಗಮನ ನೀಡಿರುವೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೊದಲು ಒತ್ತಡ ನಿಭಾಯಿಸುವ ತರಬೇತಿ ಹಾಗೂ ಏಕಾಗ್ರತೆ ಕಾಯ್ದುಕೊಳ್ಳುವ ತರಬೇತಿಯನ್ನು ಪಡೆಯಲಿದ್ದೇನೆ’’ ಎಂದು ಹೇಳಿದರು.
ಒಲಿಂಪಿಕ್ ಗೇಮ್ಸ್‌ನಲ್ಲಿ ಈ ತನಕ ಭಾರತದ ಯಾವೊಬ್ಬ ಮಹಿಳಾ ಶೂಟರ್ ಪದಕ ಗೆಲ್ಲದೆ ಇರುವ ಕಾರಣ ಹೀನಾಗೆ ಇತಿಹಾಸ ನಿರ್ಮಿಸಲು ರಿಯೋ ಒಲಿಂಪಿಕ್ಸ್ ಸುವರ್ಣಾವಕಾಶವಾಗಿದೆ.







