ಮೊದಲ ಟೆಸ್ಟ್: ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯ ಮೇಲುಗೈ

ಪಲ್ಲೆಕಲ್, ಜು.26: ಆತಿಥೇಯ ಶ್ರೀಲಂಕಾ ವಿರುದ್ಧ ಇಲ್ಲಿ ಮಂಗಳವಾರ ಆರಂಭವಾದ ಮೊದಲ ಟೆಸ್ಟ್‌ನ ಮೊದಲ ದಿನ ಪ್ರವಾಸಿ ಆಸ್ಟ್ರೇಲಿಯ ತಂಡ ಮೇಲುಗೈ ಸಾಧಿಸಿದೆ.
ಶ್ರೀಲಂಕಾವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 117 ರನ್‌ಗೆ ಆಲೌಟ್ ಮಾಡಿರುವ ಆಸ್ಟ್ರೇಲಿಯ ಮಳೆಯಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತ್ತು. ಉಸ್ಮಾನ್ ಖ್ವಾಜಾ(25) ಹಾಗೂ ನಾಯಕ ಸ್ಟೀವನ್ ಸ್ಮಿತ್(28) ಕ್ರೀಸ್ ಕಾಯ್ದುಕೊಂಡಿದ್ದರು.
ಪ್ರವಾಸಿ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್(0) ಹಾಗೂ ಜೋ ಬರ್ನ್ಸ್(3) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಶ್ರೀಲಂಕಾದ ನುವಾನ್ ಪ್ರದೀಪ್ ಹಾಗೂ ರಂಗನ ಹೆರಾತ್ ತಲಾ ಒಂದು ವಿಕೆಟ್ ಪಡೆದರು.
ಬೆರಳು ನೋವಿನಿಂದ ಚೇತರಿಸಿಕೊಂಡು ಆರು ವಾರಗಳ ಬಳಿಕ ಸಕ್ರಿಯ ಕ್ರಿಕೆಟ್‌ಗೆ ವಾಪಸಾದ ವಾರ್ನರ್ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿ ಪ್ರದೀಪ್ ಎಸೆತದಲ್ಲಿ ಕ್ಲೀನ್‌ಬೌಲ್ಡಾದರು.
ಶ್ರೀಲಂಕಾ 117ರನ್‌ಗೆ ಆಲೌಟ್:
ಇದಕ್ಕೆ ಮೊದಲು ಪಲ್ಲೆಕಲ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಆಸ್ಟ್ರೇಲಿಯ ಬೌಲರ್‌ಗಳಾದ ಜೊಶ್ ಹೇಝಲ್‌ವುಡ್(3-21), ನಥನ್ ಲಿಯೊನ್(3-12), ಮಿಚೆಲ್ ಸ್ಟಾರ್ಕ್(2-51) ಹಾಗೂ ಒ’ಕೀಫೆ(2-32) ದಾಳಿಗೆ ಸಿಲುಕಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು 34.2 ಓವರ್‌ಗಳಲ್ಲಿ 117 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡರು.
ಭೋಜನ ವಿರಾಮದ ವೇಳೆಗೆ 85 ರನ್‌ಗೆ ಲಂಕಾದ ಐದು ವಿಕೆಟ್‌ಗಳನ್ನು ಉರುಳಿಸಿದ ಆಸ್ಟ್ರೇಲಿಯದ ಬೌಲರ್‌ಗಳು ತಮ್ಮ ತಂಡಕ್ಕೆ ಆರಂಭದಲ್ಲೇ ಮೇಲುಗೈ ಒದಗಿಸಿಕೊಟ್ಟರು. ಲಂಚ್ ವಿರಾಮದ ಬಳಿಕ 6.2 ಓವರ್‌ಗಳಲ್ಲಿ ಲಂಕಾದ ಉಳಿದ ವಿಕೆಟ್‌ಗಳನ್ನು ಕಬಳಿಸಿದ ಆಸ್ಟ್ರೇಲಿಯ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಸರ್ವಪತನಗೊಳಿಸಿತು.
ಗಾಯದಿಂದ ಚೇತರಿಸಿಕೊಂಡು 8 ತಿಂಗಳ ಬಳಿಕ ಆಸೀಸ್ ತಂಡವನ್ನು ಸೇರಿಕೊಂಡಿದ್ದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇನಿಂಗ್ಸ್‌ನ 5ನೆ ಓವರ್‌ನಲ್ಲಿ ಲಂಕೆಯ ಆರಂಭಿಕ ಬ್ಯಾಟ್ಸ್‌ಮನ್ ಕರುಣರತ್ನೆ ವಿಕೆಟ್ ಉರುಳಿಸಿ ವಿಕೆಟ್ ಪತನಕ್ಕೆ ನಾಂದಿ ಹಾಡಿದರು.
ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಹೇಝಲ್‌ವುಡ್ ಇನ್ನೋರ್ವ ಆರಂಭಿಕ ಆಟಗಾರ ಕುಶಾಲ್ ಮೆಂಡಿಸ್(8) ಹಾಗೂ ಕುಶಾಲ್ ಸಿಲ್ವಾ ವಿಕೆಟ್ ಉಡಾಯಿಸಿದರು. ಹೇಝಲ್‌ವುಡ್ ತನ್ನ ಎರಡನೆ ಸ್ಪೆಲ್‌ನಲ್ಲಿ ಉಪ ನಾಯಕ ದಿನೇಶ್ ಚಾಂಡಿಮಲ್ ವಿಕೆಟ್ ಪಡೆದರು.
ಎಡಗೈ ಸ್ಪಿನ್ನರ್ ಸ್ಟೀವ್ ಒ’ಕೀಫೆ ಲಂಕಾದ ನಾಯಕ ಮ್ಯಾಥ್ಯೂಸ್ ವಿಕೆಟ್ ಪಡೆದರು. ಲಂಕಾದ ಬ್ಯಾಟಿಂಗ್‌ನಲ್ಲಿ ಚೊಚ್ಚಲ ಪಂದ್ಯ ಆಡಿರುವ ಧನಂಜಯ್ ಡಿಸಿಲ್ವಾ(24) ಅಗ್ರ ಸ್ಕೋರರ್ ಎನಿಸಿಕೊಂಡರು.
ಸಂಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್: 34.2 ಓವರ್‌ಗಳಲ್ಲಿ 117 ರನ್‌ಗೆ ಆಲೌಟ್
(ಧನಂಜಯ್ ಡಿಸಿಲ್ವಾ 24, ಪೆರೇರ 20, ಹೇಝಲ್‌ವುಡ್ 3-21, ಲಿಯೊನ್ 3-12, ಒಕೀಫೆ 2-32, ಸ್ಟಾರ್ಕ್ 2-51)
ಆಸ್ಟ್ರೇಲಿಯ ಮೊದಲ ಇನಿಂಗ್ಸ್:
20 ಓವರ್‌ಗಳಲ್ಲಿ 66/2
(ಸ್ಟೀವನ್ ಸ್ಮಿತ್ ಔಟಾಗದೆ 28, ಖ್ವಾಜಾ ಔಟಾಗದೆ 25, ಪ್ರದೀಪ್ 1-3, ಹೆರಾತ್ 1-15)







