ಸದನ ಮಲಗುವ ಮನೆಯಾಗಿದೆಯೇ?
ಮಾನ್ಯರೆ,
ಇತ್ತೀಚೆಗೆ ರಾಜ್ಯದ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಡಿವೈಎಸ್ಪಿ ಗಣಪತಿಯವರ ಸಾವಿನ ಬಗ್ಗೆ ವಿರೋಧಪಕ್ಷದವರು ಹೋರಾಟ ಮಾಡುವ ಹಿನ್ನೆಲೆಯಲ್ಲಿ ಸದನದಲ್ಲಿ ಊಟೋಪಚಾರವನ್ನು ಸ್ವೀಕರಿಸಿ, ರಾತ್ರಿಯೆಲ್ಲ ಮಲಗಿ ಅದನ್ನು ವಸತಿ ಗೃಹವನ್ನಾಗಿ ಪರಿವರ್ತಿಸುವುದು ಸರಿಯಲ್ಲ. ಹಾಗೆಯೇ ಸಾಮಾನ್ಯ ಕಾರ್ಯಕರ್ತರು ಪ್ರತಿಭಟಿಸುವ ರೀತಿಯಲ್ಲಿ ಕಿರುಚಾಟ, ಆರ್ಭಟ, ಅಸಹ್ಯಕರ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಲು ಸದನ ಯಾವುದೋ ವೃತ್ತ ಅಥವಾ ರಸ್ತೆಯಲ್ಲ. ರಾತ್ರಿಯೆಲ್ಲ ಭಜನೆ ಮಾಡಲು ಇದು ಭಜನಾಮಂದಿರವೂ ಅಲ್ಲ. ಸದನಕ್ಕೆ ತನ್ನದೇ ಆದ ಗೌರವ ಹಾಗೂ ಪ್ರಾಮುಖ್ಯತೆ ಇದೆ.
ಯಾವುದೇ ವಿಚಾರದಲ್ಲಿಯಾದರೂ ವಿರೋಧ ಪಕ್ಷದವರು ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವುದು ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಮತ್ತು ಅನಿವಾರ್ಯ ಸಂಗತಿಯಾಗಿರುತ್ತದೆ. ಆದರೆ ಈ ಹೋರಾಟದ ಹಾದಿ ಜನ ಮೆಚ್ಚುವ ಹಾಗೆ ಇರಬೇಕು, ಸಮಾಜ ಒಪ್ಪುವಂತಿರಬೇಕು. ವಿರೋಧ ಪಕ್ಷದವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸದನದಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ. ಇವರ ನ್ಯಾಯಯುತವಾದ ಬೇಡಿಕೆಗಳು ಈಡೇರದಿದ್ದರೆ ನ್ಯಾಯವನ್ನು ಕೋರಿ ಅರ್ಜಿಸಲ್ಲಿಸಲು ವಿವಿಧ ಹಂತದ ನ್ಯಾಯಾಲಯಗಳಿವೆ. ಹೀಗಿರುವಾಗ ಕೇವಲ ರಾತ್ರಿ ಸದನದಲ್ಲಿ ಮಲಗುವ ಮೂಲಕ ಪ್ರತಿಭಟನೆ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ.
ಮಹಾತ್ಮಾ ಗಾಂಧಿಯವರ ಹಾದಿಯಲ್ಲಿ ಹೋರಾಟ ಮಾಡುವುದಾದರೆ ಹೋರಾಟಗಾರರು ಸವಲತ್ತುಗಳನ್ನು ಪಡೆದು ಹೋರಾಟ ಮಾಡುವುದಲ್ಲ. ದೇಹವನ್ನು ದಂಡಿಸಿಕೊಂಡು ಸತ್ಯಾಗ್ರಹ ಮಾಡಿದಾಗ ಮಾತ್ರ ಅದಕ್ಕೊಂದು ಅರ್ಥವಿರುತ್ತದೆ. ಇಲ್ಲದಿದ್ದರೆ ಕೇವಲ ತೋರಿಕೆಯ ಹೋರಾಟಗಳಾಗುತ್ತವೆ.





