ಜಲ್ಲಿಕಟ್ಟು ಸಮರ್ಥನೀಯವಲ್ಲ: ಸು.ಕೋ.
ಹೊಸದಿಲ್ಲಿ, ಜು.26: ಕೇವಲ ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆ ಶತಮಾನಗಳಷ್ಟು ಹಳೆಯ ಪರಂಪರೆಯಾದುದರಿಂದ ಅದು ಸಮರ್ಥನೀಯ ಎನ್ನಲಾಗದೆಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.
ನ್ಯಾಯಾಲಯದ ಹಿಂದಿನ ಆದೇಶವು ತಪ್ಪೆಂದು ತಮಗೆ ಪ್ರತಿವಾದಿಗಳು ಮನವರಿಕೆ ಮಾಡಲು ಸಮರ್ಥರಾದಲ್ಲಿ, ಪ್ರಕರಣವನ್ನು ವಿಶಾಲ ಪೀಠಕ್ಕೆ ವರ್ಗಾಯಿಸಬಹುದೆಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಆರ್‌ಎಫ್ ನಾರಿಮನ್‌ರಿದ್ದ ಪೀಠವೊಂದು ತಿಳಿಸಿತು.
ಕೇವಲ ಅದು(ಜಲ್ಲಿಕಟ್ಟು) ಶತಮಾನಗಳಷ್ಟು ಹಳೆಯದಾಗಿರುವ ಮಾತ್ರಕ್ಕೆ ಅದು ಕಾನೂನುಬದ್ಧ ಅಥವಾ ಕಾನೂನು ಪ್ರಕಾರ ಅವಕಾಶ ನೀಡಬಹುದಾದುದು ಎಂದಾಗಲಾರದು. ಶತಮಾನಗಳಿಂದಲೂ 12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮದುವೆ ಮಾಡುತ್ತಿದ್ದರು. ಬಾಲ್ಯ ವಿವಾಹ ಕಾನೂನುಬದ್ಧ ಎಂದದರ ಅರ್ಥವೇ ಎಂದು ಅದು ಪ್ರಶ್ನಿಸಿತು. ಜಲ್ಲಿಕಟ್ಟುವಿನ ಸಾಂವಿಧಾನಿಕ ಸಿಂಧುತ್ವದ ಕುರಿತು ನಿರ್ಧರಿಸಲು ಪ್ರಕರಣದ ಅಂತಿಮ ವಿಚಾರಣೆಯನ್ನು ಪೀಠವು ಅ.30ಕ್ಕೆ ನಿಗದಿಗೊಳಿಸಿತು.
ವಿಚಾರಣೆಯ ವೇಳೆ ತಮಿಳುನಾಡಿನ ಪರ ವಕೀಲರು, ಜಲ್ಲಿಕಟ್ಟು ಶತಮಾನಗಳಿಂದ ನಡೆಯುತ್ತಿರುವ ಕ್ರೀಡೆಯಾಗಿದ್ದು, ರಾಜ್ಯದ ಪ್ರಾಚೀನ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದು ವಾದಿಸಿದ್ದರು.





