ಪುತ್ತೂರು: ಕೆಎಸ್‌ಆರ್‌ಟಿಸಿ ಸಿಬಂದಿಗಳ ಮುಷ್ಕರದಿಂದ ದಿನಕ್ಕೆ 50 ಲಕ್ಷ ನಷ್ಟ - ನಾಗರಾಜ್ ಶಿರಾಲಿ

ಪುತ್ತೂರು,ಜು.27: ಕರಾವಳಿ ಭಾಗದ ಅತಿದೊಡ್ಡ ವಿಭಾಗ ಎಂಬ ಹೆಗ್ಗಳಿಕೆ ಹೊಂದಿರುವ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ದಿನವೊಂದಕ್ಕೆ 50 ಲಕ್ಷ ರೂ. ಆದಾಯ ಹೊಂದಿದ್ದು, 3 ದಿನದ ಬಸ್ ಮುಷ್ಕರದಿಂದ ಒಂದೂವರೆ ಕೋಟಿ ನಷ್ಟ ಅಂದಾಜಿಸಲಾಗಿದೆ ಎಂದು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿತಿಳಿಸಿದ್ದಾರೆ. ಪುತ್ತೂರು ವಿಭಾಗಕ್ಕೆ ದಿನವೊಂದಕ್ಕೆ 50 ಲಕ್ಷ ರೂ. ಆದಾಯವಿದ್ದು, ಒಂದು ದಿನದ ಮುಷ್ಕರದಿಂದ ಅಷ್ಟೂ ನಷ್ಟವಾಗುತ್ತದೆ. ಮೂರು ದಿನ ನಿರಂತರ ಮಷ್ಕರ ನಡೆದಿದೆ ಎಂದರು.
2011ರಲ್ಲಿ ಮಂಗಳೂರು ವಿಭಾಗದಿಂದ ಬೇರ್ಪಟ್ಟು ಸ್ವತಂತ್ರ ವಿಭಾಗವಾಗಿ ಅಸ್ತಿತ್ವಕ್ಕೆ ಬಂದ ಪುತ್ತೂರು ವಿಭಾಗದಲ್ಲಿ ಪ್ರಸ್ತುತ ಪುತ್ತೂರು, ಬಿ.ಸಿ. ರೋಡ್, ಧರ್ಮಸ್ಥಳ ಮತ್ತು ಮಡಿಕೇರಿ ಘಟಕಗಳಿದ್ದು, ಎಲ್ಲವೂ ಲಾಭದಲ್ಲಿ ನಡೆಯುತ್ತಿವೆ. ಇವುಗಳ ವ್ಯಾಪ್ತಿಯಲ್ಲಿ 12 ಬಸ್ ನಿಲ್ದಾಣಗಳು ಮತ್ತು 6 ಸಂಚಾರ ನಿಯಂತ್ರಣ ಕೇಂದ್ರಗಳು ಕಾರ್ಯಾಚರಿಸುತ್ತಿವೆ.
ಪುತ್ತೂರು ವಿಭಾಗದಿಂದ 653 ಬಸ್ ಟ್ರಿಪ್‌ಗಳಿದ್ದು, ಪುತ್ತೂರು ಡಿಪೋ ಒಂದರಲ್ಲೇ ದಿನ ನಿತ್ಯ 165 ಬಸ್ ಶೆಡ್ಯೂಲ್‌ಗಳಿವೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಒಟ್ಟು 272 ಹಳ್ಳಿಗಳಿದ್ದು, ಇವುಗಳ ಪೈಕಿ 146 ರಾಷ್ಟ್ರೀಕೃತ ವಲಯದ ರೂಟ್‌ಗಳಿವೆ. ಇವುಗಳು ಸಂಪೂರ್ಣವಾಗಿ ಸರಕಾರಿ ಬಸ್‌ಗಳನ್ನೇ ಹೊಂದಿವೆ. ರಾಷ್ಟ್ರೀಕೃತವಲ್ಲದ 97 ಹಳ್ಳಿಗಳಿಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿದೆ ಎಂದು ಹೇಳಿದರು.





