ಹರೇಕಳ ಶಾಲೆಯಲ್ಲಿ ವಿವಿಧ ಸಂಘ, ಯೋಜನೆಗಳ ಉದ್ಘಾಟನೆ

ಹರೇಕಳ ಶ್ರೀ ರಾಮಕೃಷ್ಣ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಕೊಣಾಜೆ,ಜು.27: ವಿದ್ಯಾರ್ಥಿಗಳು ಅಂಕ ಗಳಿಸುವ ಮುಖ್ಯ ಉದ್ದೇಶ ಮಾತ್ರ ಹೊಂದಿರದೆ ಸಂಘಟನೆ, ಸಮಾಜಸೇವೆ, ಪರಿಸರ ಕಾಳಜಿ, ಸಾಹಿತ್ಯ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಭಾಗವಹಿಸಬೇಕಿದ್ದು ಇದಕ್ಕೆ ಶೈಕ್ಷಣಿಕ ಸಂಘಗಳು ಸಹಕಾರಿ. ಯಾರು ಎಷ್ಟೇ ಉನ್ನತ ಸ್ಥಾನ ತಲುಪಬೇಕಾದರೂ ಅದರ ಹಿಂದೆ ವಿದ್ಯೆ ನೀಡಿ, ಬುದ್ಧಿ ಹೇಳಿ, ತಿದ್ದುವ ಶಿಕ್ಷಕರ ಪಾತ್ರ ಇರುತ್ತದೆ. ಇಂದಿನ ವಿದ್ಯಾರ್ಥಿಗಳು ನಾಳೆ ದೊಡ್ಡ ಸ್ಥಾನಕ್ಕೇರಬಹುದು, ಆದರೆ ಕಲಿತ ಶಾಲೆ, ಕಲಿಸಿದ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ವಿವಿಧ ಶೈಕ್ಷಣಿಕ ಸಂಘಗಳು ಹಾಗೂ ಯೋಜನೆಗಳ ಉದ್ಘಾಟನೆ, ರಾಜ್ಯ, ರಾಷ್ಟ್ರಪತಿ ಪುರಸ್ಕಾರ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿ ದೇವರು ಕಣ್ಮುಂದೆ ಇಲ್ಲದಿದ್ದರೂ ನಾವು ಭಕ್ತಿ, ನಂಬಿಕೆಯಿಂದ ಕೈ ಮುಗಿಯುತ್ತೇವೆ, ಶಾಲೆಗಳೆಂದರೆ ಅಕ್ಷರ ಜ್ಞಾನ ನೀಡುವ ಇಲ್ಲಿ ಕಲಿಸುವ ಶಿಕ್ಷಕರಿಂದಾಗಿ ಮಾತನಾಡುವ ದೇಗುಲಗಳಾಗಿದ್ದು ಭಯ, ಭಕ್ತಿ, ಗೌರವ ಅಗತ್ಯ ಎಂದು ಹೇಳಿದರು. ಮುಖ್ಯ ಅತಿಥಿ ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗ ಪ್ರಾಧ್ಯಾಪಕ ಡಾ.ಮಂಜಯ್ಯ ಮಾತನಾಡಿ, ನಾವು ಮಾಡುವ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ನಮಗಿಂತ ಹೆಚ್ಚಾಗಿ ಹೆತ್ತವರು ಹೆಮ್ಮೆ ಪಡುತ್ತಾರೆ. ನಮ್ಮ ಜೀವನ ಉತ್ತಮ ರೀತಿಯಿಂದ ಕೂಡಿರಬೇಕಾದರೆ ಕೌಶಲ್ಯ ವೃದ್ಧಿಸುವಂತಹ ಅಂತರ್ಜಾಲದ ಬಳಕೆ ಮಾಡಬೇಕು. ಇದರಿಂದ ಜೀವನವೂ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಶಾಲೆಯಲ್ಲಿರುವ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಗುರುತಿಸಿ ಹೆಸರು ನೀಡಿದರೆ ತಾನು ವಿವಿಯಲ್ಲಿರುವವರೆಗೆ ಆತನ ಶಿಕ್ಷಣಕ್ಕೆ ಬೇಕಾದ ಯಾವುದೇ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು.
ಹರೇಕಳ ಗ್ರಾಮದಲ್ಲಿರುವ ಮೂರು ದೈವಗಳ ಹೆಸರಿನಲ್ಲಿ ತ್ರಿಶಕ್ತಿ ವಿದ್ಯಾವರ್ಧಕ ಸಂಘ ಸ್ಥಾಪಿಸಲಾಗಿದ್ದು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳು ಎಲ್ಲಾ ವಿಭಾಗದಲ್ಲೂ ರಾಜ್ಯ, ರಾಷ್ಟ್ರಮಟ್ಟದಲ್ಲೂ ಮಿಂಚುವ ಮೂಲಕ ಶಾಲೆ ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಅಧ್ಯಕ್ಷತೆ ವಹಿಸಿದ್ದ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಪ್ರಹ್ಲಾದ್ ರೈ ಮುದಲೇಮಾರು ಹರ್ಷ ವ್ಯಕ್ತಪಡಿಸಿದರು.
ಮಂಗಳೂರು ಶ್ರೀ ಭಗವತೀ ಸಹಕಾರಿ ಬ್ಯಾಂಕ್ ಪ್ರಬಂಧಕ ತೋನ್ಸೆ ಪುಷ್ಕಳ್ ಕುಮಾರ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಭರತ್ರಾಜ್ ಶೆಟ್ಟಿ ಪಜೀರುಗುತ್ತು ಉಪಸ್ಥಿತರಿದ್ದರು.
ಶಿಕ್ಷಕ ರವಿಶಂಕರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ರವೀಂದ್ರ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಕಾರ್ಯಕ್ರಮ ನಿರೂಪಿಸಿದರು.







