ಮಹದಾಯಿ ಜಲ ವಿವಾದ : ಮುಂದಿನ ವಾರ ಸರ್ವಪಕ್ಷಗಳ ಸಭೆ- ಸಿದ್ದರಾಮಯ್ಯ

ಬೆಂಗಳೂರು, ಜು.27: ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಧೀಕರಣ ತಿರಸ್ಕರಿಸುವ ಹಿನ್ನೆಲೆಯಲ್ಲಿ ಮುಂದಿನ ವಾರ ಸರ್ವಪಕ್ಷಗಳ ಮುಖಂಡರ ಸಭೆಯನ್ನು ಕರೆದು ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಬುಧವಾರ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಧೀಕರಣ ರಾಜ್ಯದ ಅರ್ಜಿಯನ್ನು ತಿರಸ್ಕರಿಸಲು ನೀಡಿರುವ ಕಾರಣಗಳನ್ನು ಒಳಗೊಂಡ ತೀರ್ಪಿನ ಪ್ರತಿ ಸಿಕ್ಕ ನಂತರ, ವಕೀಲರೊಂದಿಗೂ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ರಾಜ್ಯದ ಪರವಾಗಿ ನ್ಯಾಯಾಧೀಕರಣ ಎದುರು ವಾದ ಮಂಡನೆ ಮಾಡಿದ ಹಿರಿಯ ವಕೀಲ ನಾರಿಮನ್ ಜೊತೆ ಮಾತನಾಡಿದ್ದೇನೆ. ಆದೇಶದ ಪ್ರತಿ ಪೂರ್ಣಪ್ರಮಾಣದಲ್ಲಿ ಸಿಕ್ಕ ನಂತರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಾ ಅಥವಾ ಬೇಡವಾ ಎಂಬುದರ ಕುರಿತು ಸಾಧಕ ಬಾಧಕಗಳ ಸರ್ವಪಕ್ಷಗಳ ಮುಖಂಡರ ಸಭೆಯಲ್ಲೂ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.ಅಂತರರಾಜ್ಯ ಜಲ, ಭಾಷೆ, ಗಡಿ ವಿವಾದ ಉದ್ಭವಿಸಿದಾಗ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಧೀಕರಣ, ನ್ಯಾಯಾಲಯಗಳಲ್ಲಿ ರಾಜ್ಯದ ಹಿತವನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.ಅಂತರರಾಜ್ಯ ವಿವಾದಗಳಲ್ಲಿ ನಾವು ಯಾವುತ್ತೂ ರಾಜಕೀಯ ಮಾಡಿಲ್ಲ. ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಇವತ್ತಿನವರೆಗೆ ಎಲ್ಲ ವಿವಾದಗಳನ್ನು ಎದುರಿಸಿದ್ದೇವೆ. ನ್ಯಾಯಾಧೀಕರಣದಿಂದ ತೀರ್ಪು ಬಂದಿರುವುದರಿಂದ ಮುಂದಿನ ವಾರ ಸರ್ವಪಕ್ಷಗಳ ಮುಖಂಡರ ಸಭೆಯನ್ನು ಕರೆದು ಅವರ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ ಎಂದು ಅವರು ಹೇಳಿದರು.ರಾಜ್ಯ ಸರಕಾರವು ಸಲ್ಲಿಸಿದ್ದ ಮಧ್ಯಂತರ ಅರ್ಜಿಯಲ್ಲಿ ಕುಡಿಯುವ ನೀರಿಗಾಗಿ 7.56 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಬೇಡಿಕೆ ಇಡಲಾಗಿತ್ತು. ಆದರೆ, ನ್ಯಾಯಾಧೀಕರಣ ನಮ್ಮ ಮನವಿಯನ್ನು ತಿರಸ್ಕರಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.ಮಹದಾಯಿ ಕುಡಿಯುವ ನೀರಿಗಾಗಿ ಆ ಭಾಗದ ರೈತರು ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿ ಎಂದು ಒತ್ತಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲದೆ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಧ್ಯಸ್ಥಿಕೆಗೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿಗೆ ಒತ್ತಾಯ ಮಾಡಲಾಗಿತ್ತು ಎಂದು ಅವರು ತಿಳಿಸಿದರು.ತೆಲುಗು ಗಂಗಾ ಯೋಜನೆ ಜಾರಿ ಸಂದರ್ಭದಲ್ಲಿ ತಮಿಳುನಾಡು ಸರಕಾರ ಪ್ರತಿವಾದಿ ಇಲ್ಲದೆ ಇದ್ದಿದ್ದರೂ ಚೈನ್ನೈ ನಗರಕ್ಕೆ 5 ಟಿಎಂಸಿ ನೀರು ಒದಗಿಸಲು ಅಂದಿನ ಪ್ರಧಾನಿ ಇಂದಿರಾಗಾಂಧಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು. ಅಲ್ಲದೆ, ಅಟಲ್ ಬಿಹಾರಿ ವಾಜಪೇಯಿ ಸರಕಾರದ ಸಂದರ್ಭದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಿದ್ದನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.ಆದರೆ, ಪ್ರಧಾನಿ ನರೇಂದ್ರಮೋದಿ ಈವರೆಗೆ ಮಧ್ಯಸ್ಥಿಕೆಗೆ ಪ್ರಯತ್ನ ಮಾಡಿಲ್ಲ. ಇದರ ಜೊತೆಗೆ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆನಂತರ, ನಾನು ಪ್ರಧಾನಿಯನ್ನು ಭೇಟಿ ಮಾಡಿದ್ದಲ್ಲದೆ, ಪತ್ರವನ್ನು ಬರೆದು ಮನವಿ ಮಾಡಿದ್ದೆ. ಆದರೆ, ಈವರೆಗೆ ಅವರು ಅದಕ್ಕೆ ಸ್ಪಂದಿಸಿಲ್ಲ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.ಕುಡಿಯುವ ನೀರಿನ ವಿಚಾರವಾಗಿರುವುದರಿಂದ ಪ್ರಧಾನಮಂತ್ರಿ ಈಗಲಾದರೂ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯ ಮಾಡುತ್ತೇನೆ. ಹುಬ್ಬಳ್ಳಿ-ಧಾರವಾಡ, ಗದಗ, ನರಗುಂದ, ನವಲಗುಂದ, ಬೆಳಗಾವಿ, ಸವದತ್ತಿ, ರಾಮದುರ್ಗದ ಜನತೆಗೆ ಈ ಯೋಜನೆಯಿಂದ ನೀರು ಸಿಗಲಿದೆ. ರಾಷ್ಟ್ರೀಯ ಜಲ ನೀತಿಯು ಕುಡಿಯುವ ನೀರಿಗೆ ಆದ್ಯತೆ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.ರಾಜ್ಯದ ಹಿತ ಕಾಪಾಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಆದುದರಿಂದ, ರಾಜ್ಯದ ಜನತೆ ಅದರಲ್ಲೂ ವಿಶೇಷವಾಗಿ ಆ ಭಾಗದ ರೈತರು, ನಾಗರಿಕರು ಉದ್ರೇಕಕ್ಕೆ ಒಳಗಾಗುವುದು ಬೇಡ. ರಾಜ್ಯ ಸರಕಾರ ನಿಮ್ಮ ಜೊತೆ ಇದೆ. ನಿಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಗುರುವಾರ ಬೆಲ್ಜಿಯಂಗೆ ಸಿಎಂ
ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ನಗರದಲ್ಲಿರುವ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ರಾಕೇಶ್ ದಾಖಲಾಗಿದ್ದಾರೆ. ಅವರ ಆರೋಗ್ಯ ಚಿಂತಾಜನಕವಾಗಿದ್ದರೂ, ಸ್ಥಿರವಾಗಿದೆ. ವೈದ್ಯರ ತಂಡ ನೀಡುತ್ತಿರುವ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ಗುರುವಾರ ಬೆಳಗಿನ ಜಾವ 4.30ಕ್ಕೆ ನಾನು ಬೆಲ್ಜಿಯಂಗೆ ತೆರಳುತ್ತಿದ್ದೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ







