ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಕಾರ್ಮಿಕರ ಮುಷ್ಕರ ಅಂತ್ಯ - ಬಸ್ ಸಂಚಾರ ಆರಂಭ

ಮಂಗಳೂರು,ಜು.27:ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಕೆಎಸ್ಸಾರ್ಟಿಸಿ ಬಸ್ ಕಾರ್ಮಿಕರು ಮುಷ್ಕರ ಕೊನೆಗೊಳಿಸಿದ್ದು ಬುಧವಾರ ಸಂಜೆಯಿಂದಲೆ ಬಸ್ ಸಂಚಾರ ಆರಂಭಗೊಂಡಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಸಂಜೆಯವರೆಗೆ ಬಸ್‌ಗಳ ಸಂಚಾರವಿರಲಿಲ್ಲ. ಬಸ್ ಕಾರ್ಮಿಕರ ಮುಷ್ಕರವಿರುವುದರಿಂದ ಬಸ್ ನಿಲ್ದಾಣಗಳಿಗೆ ಸಾರ್ವಜನಿಕರು ಬಂದಿರಲಿಲ್ಲ. ಸಂಜೆ ವೇಳೆಗೆ ಬಸ್ ಮುಷ್ಕರ ಕೊನೆಗೊಂಡ ಹಿನ್ನೆಲೆಯಲ್ಲಿ ಬಸ್ ಸಂಚಾರವನ್ನು ಸಂಜೆಯಿಂದಲೆ ಆರಂಭಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿನಾಯಕ್ ಹೆಗ್ಡೆ ತಿಳಿಸಿದ್ದಾರೆ. ವಾರ್ತಾಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಿದರೆ ಅವರ ಅಗತ್ಯಕ್ಕೆ ತಕ್ಕಂತೆ ಇಂದಿನಿಂದಲೆ ಬಸ್ ಓಡಾಟ ನಡೆಸಲಾಗುವುದು . ನಾಳೆಯಿಂದ ಎಲ್ಲಾ ಬಸ್‌ಗಳು ಓಡಾಟ ನಡೆಸಲಿದೆ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಪ್ರ.ಕಾರ್ಯದರ್ಶಿ ಪ್ರವೀಣ್ ಕುಮಾರ್ ಅವರು ಸರಕಾರದೊಂದಿಗೆ ಮಾತುಕತೆ ನಡೆಸಿ 12.5 ಶೇಕಡ ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದ ಅವರು ಸಾರಿಗೆ ಕಾರ್ಮಿಕರು ಸಂಜೆಯೆ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಹೇಳಿದ್ದಾರೆ.





