ಮಂಜನಾಡಿ: ಶಾಲಾ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಕೊಣಾಜೆ,ಜು.27: ಶಿಕ್ಷಕರನ್ನು ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳಿ ವರ್ಗಾವಣೆ ಮಾಡುವುದು ಬೇಡ ಎಂದು ಆಗ್ರಹಿಸಿ ಮಂಗಳಾಂತಿ ದ.ಕ.ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಶಾಲೆಯಲ್ಲಿ ಮಕ್ಕಳಿದ್ದಾರೆ ಆದರೆ ಶಿಕ್ಷಣ ಇಲಾಖೆ ನಾಲ್ಕು ಶಿಕ್ಷಕರನ್ನು ವರ್ಗಾವಣೆ ಮಾಡಲು ಹೊರಟಿದೆ ಹಿರಿಯರು ಕಷ್ಟಪಟ್ಟು ಪ್ರಾರಂಬಿಸಿದ ಈ ಶಾಲೆಯನ್ನು ಉಳಿಸುವ ಕಾರ್ಯ ಆಗಬೇಕಾದರೆ ವರ್ಗಾವಣೆಯನ್ನು ರದ್ದು ಮಾಡಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ ನಮ್ಮ ಶಾಲೆ ಉಳಿಸಬೇಕಾದರೆ ಶಿಕ್ಷಕರನ್ನು ವರ್ಗಾವಣೆ ಮಾಡುವುದು ಬೇಡ, ಸಂಬಂತ ಜನಪ್ರತಿನಿಗಳಿಗೆ ಮನವಿ ನೀಡಿದ್ದೇವೆ, ಅವರ ಆದೇಶಕ್ಕೆ ಕಾಯುತ್ತಿದ್ದು, ನಮ್ಮ ಪರವಾಗಿ ಬರದಿದ್ದರೆ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದರು.
ಗ್ರಾಮೀಣ ಪ್ರದೇಶ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶವಾದ ಈ ಶಾಲೆಯಲ್ಲಿ 243 ವಿದ್ಯಾರ್ಥಿಗಳಿದ್ದು, ಪ್ರಸ್ತುತ 11 ಶಿಕ್ಷಕರಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಮುಖ್ಯ ಶಿಕ್ಷಕರು ನಿವೃತ್ತಿಯಾಗಲಿದ್ದು, ಇರುವ 10 ಶಿಕ್ಷಕರಲ್ಲಿ 4 ಶಿಕ್ಷಕರನ್ನು ವರ್ಗಾವಣೆ ನಡೆಸುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. 243 ವಿದ್ಯಾರ್ಥಿಗಳಿಗೆ ಕನಿಷ್ಟ 10 ಶಿಕ್ಷಕರು ಬೇಕಾಗಿದ್ದು, ಉಳಿಯುವ 6 ಮಂದಿ ಶಿಕ್ಷಕರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಹುಸೇನ್ ಕುಂಇ, ಬಿ.ಎಂ. ಹಮೀದ್, ಉಮುಲ್ ಕುಲೂಸ್, ಝೀನತ್, ಸ್ಥಳೀಯ ಕಾಂಗ್ರೆಸ್ ನಾಯಕ ಅಬ್ದುಲ್ ಹಮೀದ್ ಆರಂಗಡಿ, ಅಶ್ರಫ್ ಬಸರಾ, ಮನೀರ್ ಬಸರಾ ಹಳೆ ವಿದ್ಯಾರ್ಥಿಗಳಾದ ಅಶ್ರಫ್ ಶಾಫಿ , ಮಹಮ್ಮದ್ ಹನೀಫ್, ಶಾಲಾ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.







