ಮಂಗಳೂರು: ಆತ್ಯಾಚಾರ ಆರೋಪ ಸಾಬೀತು - ಗುರುವಾರ ಶಿಕ್ಷೆ ಪ್ರಕಟ
ಮಂಗಳೂರು, ಜು. 27: ಅತ್ಯಾಚಾರ ಮತ್ತು ವಂಚನೆ ಪ್ರಕರಣದಲ್ಲಿ ಪುತ್ತೂರು ತಾಲೂಕು ಕೋಡಿಂಬಾಳ ಗ್ರಾಮದ ಹಸಂತಡ್ಕ ಮನೆ ಸುಂದರ (31) ಎಂಬಾತನ ಆರೋಪ ಇಲ್ಲಿನ 6ನೆ ಹೆಚ್ಚುವರಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ನ್ಯಾಯಾಲಯವು ಅಪರಾಧಿಗೆ ಗುರುವಾರ ಶಿಕ್ಷೆ ಪ್ರಕಟಿಸಲಿದೆ.
ಈತ ಸಂಬಂಧಿ 24 ಹರೆಯದ ಯುವತಿಯೋರ್ವಳನ್ನು ಅತ್ಯಾಚಾರ ನಡೆಸಿ ವಂಚಿಸಿದ್ದನು. ಗಾರೆ ಕೆಲಸಕ್ಕೆಂದು ಮನೆಗೆ ಆಗಮಿಸುತ್ತಿದ್ದ ಸುಂದರ ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ಯುವತಿ ಗರ್ಭಿಣಿಯಾದ ಬಳಿಕ ಆಕೆ ಮನೆಯವರಿಗೆ ತಿಳಿಸಿದ್ದಾಳೆ. ಮನೆಯವರು ಎರಡು ಬಾರಿ ಸುಂದರನೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಸುಂದರ ಯುವತಿಯೊಂದಿಗೆ ವಿವಾಹವಾಗಲು ಒಪ್ಪಿರಲಿಲ್ಲ.
2009ರ ನವೆಂಬರ್ 7ರಂದು ಕಡಬ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ವಂಚನೆ ದೂರು ದಾಖಲಾಗಿತ್ತು. ನವೆಂಬರ್ 13 2009ರಂದು ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ 2010ರಲ್ಲಿ ಅಂದಿನ ಕಡಬ ಠಾಣಾ ಎಸ್‌ಐ ವಿನಾಯಕ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. 2015ರಲ್ಲಿ ಪ್ರಕರಣ ಪುತ್ತೂರು ನ್ಯಾಯಾಲಯದಿಂದ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು 2016ರ ಫೆಬ್ರವರಿ 25ರಂದು ಮೊದಲ ವಿಚಾರಣೆ ಆರಂಭವಾಗಿತ್ತು. ವಿಚಾರಣೆ ವೇಳೆ ಯುವತಿಯ ಸಂಬಂಧಿಕರ ಸಹಿತ ಒಟ್ಟು 10 ಮಂದಿ ಸಾಕ್ಷಿಗಳನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು. ಅಲ್ಲದೇ ಈ ಸಂಬಂಧ ಬೆಂಗಳೂರಿನಿಂದ ಡಿಎನ್‌ಎ ವರದಿ ಪಡೆದುಕೊಳ್ಳಲಾಗಿತ್ತು. ಡಿಎನ್‌ಎ ಮಾದರಿ ನೀಡಿದ್ದ ಅಧಿಕಾರಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದರು.
ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತುಸತ್ರ ನ್ಯಾಯಾಲಯ ನ್ಯಾಯಾಧೀಶ ಡಿ.ಟಿ. ಪುಟ್ಟರಂಗಸ್ವಾಮಿ ವಿಚಾರಣೆ ನಡೆಸಿದ್ದು, ಕೃತ್ಯ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿ ಎಂದು ಘೋಷಿಸಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.







