ಸಿರಿಯದ ಪಟ್ಟಣದಲ್ಲಿ ಅವಳಿ ಸ್ಫೋಟ: 44 ಸಾವು

ಡಮಾಸ್ಕಸ್, ಜು. 27: ಉತ್ತರ ಸಿರಿಯದ ಕುರ್ದಿಶ್ ಪಟ್ಟಣವೊಂದರಲ್ಲಿ ಸೇರಿದ್ದ ಗುಂಪೊಂದರ ಮೇಲೆ ಬುಧವಾರ ನಡೆದ ಅವಳಿ ಬಾಂಬ್ ದಾಳಿಗಳಲ್ಲಿ 44 ಮಂದಿ ಮೃತಪಟ್ಟಿದ್ದಾರೆ ಹಾಗೂ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯದ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಮತ್ತು ಕುರ್ದಿಶ್ ಮಾಧ್ಯಮ ವರದಿ ಮಾಡಿವೆ.
ಅದೇ ವೇಳೆ, ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ.
ಭಾರೀ ಪ್ರಮಾಣದಲ್ಲಿ ಸ್ಫೋಟಕಗಳನ್ನು ಹೊಂದಿದ್ದ ಟ್ರಕ್ಕೊಂದು ಖಾಮಿಶ್ಲಿ ಪಟ್ಟಣದ ಪಶ್ಚಿಮದ ತುದಿಯಲ್ಲಿ ಸ್ಫೋಟಗೊಂಡಿತು ಹಾಗೂ ಕೆಲವು ನಿಮಿಷಗಳ ಬಳಿಕ ಅದೇ ಸ್ಥಳದಲ್ಲಿ ಸ್ಫೋಟಕಗಳನ್ನು ಹೊಂದಿದ್ದ ಮೋಟರ್‌ಸೈಕಲೊಂದು ಸ್ಫೋಟಿಸಿತು ಎಂದು ಮಾಧ್ಯಮ ವರದಿಗಳು ಹೇಳಿವೆ.
ಅವಳಿ ಸ್ಫೋಟಗಳು ಆ ಸ್ಥಳದಲ್ಲಿ ಭಾರೀ ಹಾನಿಯನ್ನು ಉಂಟು ಮಾಡಿವೆ. ಅವಶೇಷಗಳಡಿಯಿಂದ ಸಂತ್ರಸ್ತರನ್ನು ಹೊರ ತೆಗೆಯಲಾಗುತ್ತಿದೆ.
ಟರ್ಕಿಯ ಗಡಿ ಸಮೀಪದಲ್ಲಿರುವ ಖಾಮಿಶ್ಲಿ ಪಟ್ಟಣವನ್ನು ಮುಖ್ಯವಾಗಿ ಕುರ್ದ್‌ಗಳು ನಿಯಂತ್ರಿಸುತ್ತಿದ್ದಾರೆ. ಆದರೆ, ಅಲ್ಲಿ ಸಿರಿಯ ಸರಕಾರದ ಪಡೆಗಳೂ ಇದ್ದು, ಪಟ್ಟಣದ ವಿಮಾನ ನಿಲ್ದಾಣವನ್ನು ನಿಯಂತ್ರಿಸುತ್ತಿವೆ.





