ಪ್ರಧಾನಿ ಮೋದಿ ನನ್ನನ್ನು ಕೊಲ್ಲಿಸಬಹುದು: ಕೇಜ್ರಿವಾಲ್

ಹೊಸದಿಲ್ಲಿ,ಜು.27: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ಅತ್ಯಂತ ಕಟುದಾಳಿಯನ್ನು ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಮೋದಿ ತನ್ನನ್ನು ಕೊಲ್ಲಿಸಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ,ದೇಶವು ಸರಕ್ಷಿತವಾದ ಕೈಗಳಲ್ಲಿದೆಯೇ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ 10 ನಿಮಿಷಗಳ ತನ್ನ ವೀಡಿಯೊ ಸಂದೇಶದಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಆಪ್ ಶಾಸಕರು ಮತ್ತು ಕಾರ್ಯಕರ್ತರ ಬಂಧನವನ್ನು ಪ್ರಸ್ತಾಪಿಸಿರುವ ಕೇಜ್ರಿವಾಲ್, ಮೋದಿ ಆಪ್ ಪಕ್ಷೀಯರನ್ನು ದಮನಿಸುತ್ತಿರುವ ಷಡ್ಯಂತ್ರದ ರೂವಾರಿಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಅವರು ತನ್ನ ಪಕ್ಷವನ್ನು ಸಂಪೂರ್ಣವಾಗಿ ದಮನಿಸಲು ಕಟಿಬದ್ಧರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ಅತ್ಯಂತ ನಿರ್ಣಾಯಕ ಅವಧಿಯಾಗಿದೆ ಎಂದು ಹೇಳಿರುವ ಅವರು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಕಷ್ಟಗಳು ಎದುರಾಗಲಿವೆ ಎನ್ನುವುದನ್ನು ಆಪ್ ಸ್ವಯಂಸೇವಕರು,ಶಾಸಕರು ಮತ್ತು ದಿಲ್ಲಿ ಸಚಿವರಿಗೆ ನೆನಪಿಸಿದರು. ಇದನ್ನು ಎದುರಿಸುವ ಶಕ್ತಿಯಿಲ್ಲದಿದ್ದರೆ ಪಕ್ಷವನ್ನು ತೊರೆಯುವಂತೆ ಕಿವಿಮಾತು ಹೇಳಿದ್ದಾರೆ.
ಮೋದಿ ಯಾವುದೇ ಮಟ್ಟಕ್ಕೂ ಹೋಗಬಹುದು. ಅವರು ನಮ್ಮನ್ನು ಕೊಲ್ಲಿಸಬಹುದು,ಅವರು ನನ್ನನ್ನೂ ಕೊಲ್ಲಿಸಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಮತ್ತು ಅಂತಿಮ ಬಲಿದಾನಕ್ಕೆ ನೀವು ಸಿದ್ಧವೇ ಎನ್ನುವುದನ್ನು ನೋಡಿಕೊಳ್ಳಿ. ಹೇಗಿದ್ದರೂ ನಮ್ಮ ಎಲ್ಲ ಶಾಸಕರು ಜೈಲು ಸೇರಲಿದ್ದಾರೆ. ಇದಕ್ಕೆಲ್ಲ ನೀವು ಸಿದ್ಧರಿದ್ದರೆ ನಮ್ಮೆಂದಿಗೆ ಇರಿ, ಇಲ್ಲವಾದರೆ ನೀವು ಪಕ್ಷದಿಂದ ದೂರವಾಗಬಹುದು ಎಂದಿದ್ದಾರೆ.
ಮೋದಿಯವರು ಸಂಪೂರ್ಣ ಹತಾಶರಾಗಿದ್ದಾರೆ. ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಯಾವುದೇ ತಾಳಮೇಳಗಳಿಲ್ಲ. ಅವರು ಸಿಟ್ಟನಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಇದು ರಾಷ್ಟ್ರಕ್ಕೆ ಅಪಾಯಕಾರಿಯಾಗಿದೆ ಎಂದಿರುವ ಕೇಜ್ರಿವಾಲ್, ಶಾಸಕರ ಬಂಧನ ಮಹತ್ವದ್ದಲ್ಲ.ಈ ದೇಶವು ಮೋದಿಯವರ ಕೈಗಳಲ್ಲಿ ಸುರಕ್ಷಿತವಾಗಿದೆಯೇ ಎನ್ನುವುದು ಮಹತ್ವದ ಪ್ರಶ್ನೆಯಾಗಿದೆ ಎಂದಿದ್ದಾರೆ.





