ಗಲಾಟೆ, ಗದ್ದಲದಲ್ಲಿ ಮುಗಿಯುವ ಪುದು ಗ್ರಾಮ ಸಭೆ
ಅಭಿವೃದ್ಧಿಗೆ ಪೂರಕ ಸಭೆ ನಡೆಸುವಂತೆ ನಾಗರಿಕರಿಂದ ಸಿಇಒಗೆ ಮನವಿ

ಫರಂಗಿಪೇಟೆ, ಜು. 27: ತಾಲೂಕಿನ ಪುದು ಗ್ರಾಮದ ಗ್ರಾಮ ಸಭೆಯು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ನಡೆಯದೆ ಪ್ರತೀ ಬಾರಿಯೂ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ನಡುವೆ ಗಲಾಟೆ ಗದ್ದಲದಲ್ಲೇ ಮುಗಿಯುತ್ತಿದೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ತೊಡಕಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮದ ನಾಗರಿಕರ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಗ್ರಾಪಂನಲ್ಲಿ ಜನಪ್ರತಿನಿಧಿಗಳು ತಮ್ಮ ಪ್ರಭಾವ ಬೀರಿ ಅಭಿವೃದ್ಧಿ ಅಧಿಕಾರಿ ಸಹಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಒತ್ತಡ ಹೇರುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಮಾಡುತ್ತಿದ್ದಾರೆ. ಅರ್ಜಿಗಳನ್ನು ನಿರ್ದಿಷ್ಟ ಸಮಯದಲ್ಲಿ ವಿಲೇವಾರಿ ಮಾಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಶ್ನಿಸುವವರ ಮೇಲೆ ಬೆದರಿಕೆಯೊಡ್ಡಲಾಗುತ್ತಿದೆ. ಗ್ರಾಮ ಸಭೆಗೆ ಆಗಮಿಸುವ ನೊಡೆಲ್ ಅಧಿಕಾರಿಗಳು ಸಭೆಯಲ್ಲಿ ನಡೆದ ಗಲಾಟೆ ಗದ್ದಲದ ಬಗ್ಗೆ ಮೇಲಧಿಕಾರಿಗಳಿಗೆ ಯಾವುದೇ ವರದಿ ನೀಡದಿರುವುದರಿಂದ ಈ ಪರಿಸ್ಥಿತಿ ಪುನರ್ವತನೆಯಾಗುತ್ತಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಗ್ರಾಮ ಸಭೆಯಲ್ಲಿ ನಾಗರಿಕರಿಗೆ ಭದ್ರತೆ ಒದಗಿಸುವಂತೆ ಬಂಟ್ವಾಳ ಠಾಣೆಗೆ ಮನವಿ ಮಾಡಲಾಗಿದ್ದು, ಗ್ರಾಮದ ಅಭಿವೃದ್ಧಿ ಕೆಲಸಗಳ ಬಗ್ಗೆ ಪೂರಕ ಚರ್ಚೆ ನಡೆಯದೆ ವ್ಯರ್ಥವಾಗುತ್ತಿರುವ ಗ್ರಾಮ ಸಭೆಯ ಕುರಿತಂತೆ ಬಂಟ್ವಾಳ ತಹಶೀಲ್ದಾರರು, ತಾಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೂ ದೂರು ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ ನಾಗರಿಕರು ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಗ್ರಾಮ ಸಭೆ ನಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಇಕ್ಬಾಲ್ ಹತ್ತನೇಮೈಲುಗಲ್ಲು, ಜಮಾಲುದ್ದೀನ್ ಫರಂಗಿಪೇಟೆ, ಸಲೀಂ ಕುಂಪನಮಜಲು, ಖಾದರ್ ಅಮೆಮಾರ್, ಅಶ್ರಫ್ ಅಮೆಮಾರ್, ತಂಝೀಮ್, ಹಾರೂನ್ ಮಾರಿಪಳ್ಳ ಉಪಸ್ಥಿತರಿದ್ದರು.







