ಮಾನವ ಹಕ್ಕು ಆಯೋಗದ ಬಗ್ಗೆ ಜಾಗೃತಿ ಅಗತ್ಯ: ಅಲೋಕ್

ಕಾರವಾರ, ಜು.27: ಮಾನವಾಧಿಕಾರ ಉಲ್ಲಂಘನೆಯಾಗದಂತೆ ಮಾನವ ಹಕ್ಕು ಆಯೋಗ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನವ ಹಕ್ಕು ಆಯೋಗದ ಆಯುಕ್ತ ಅಲೋಕ್‌ಕುಮಾರ್ ಹೇಳಿದರು.
ನಗರದ ದಿವೆಕರ್ ವಾಣಿಜ್ಯ ಮಹಾವಿದ್ಯಾನಿಲಯದಲ್ಲಿ ಮಾನವಹಕ್ಕು ಆಯೋಗದ ಜಿಲ್ಲಾ ಸಮಿತಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಜನಸಾಮಾನ್ಯರು ಮಾನವ ಹಕ್ಕಿನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಯಾವುದೇ ಇಲಾಖೆಯಲ್ಲಿ ಜನರ ಮೇಲೆ ನಡೆಯಬಹುದಾದ ದೌರ್ಜನ್ಯ, ಕಿರುಕುಳ ಹಾಗೂ ರಕ್ಷಣೆಗೆ ಸಮಾನತೆ ಕಾಪಾಡುತ್ತಿದೆ ಎಂದರು. ಮಾನವಾಧಿಕಾರದ ಬಗ್ಗೆ ಇನ್ನು ಅನೇಕರಿಗೆ ತಿಳಿದಿಲ್ಲ. ಅಲ್ಲದೆ ಗ್ರಾಮೀಣ ಪ್ರದೇಶದ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎಂದರು. ನ್ಯಾಯವಾದಿ ಎಸ್ಪಿ ಕಾಮತ್ ಮಾತನಾಡಿ, ಬಾಲಕಾರ್ಮಿಕರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನದಲ್ಲಿ ಅದಕ್ಕೆ ಕಡಿವಾಣ ಅಗತ್ಯವಾಗಿದೆ ಎಂದರು. ಮಾನವ ಹಕ್ಕು ಆಯೋಗದ ರಾಜ್ಯ ಸಂಘಟನಾ ಅಧ್ಯಕ್ಷ ಸ್ಟಾನ್ಲಿ ಕನಿಕರಾಜ್ ಮಾತನಾಡಿದರು. ಆಯೋಗದ ರಾಷ್ಟ್ರೀಯ ಅಧ್ಯಕ್ಷ ರಾಬರ್ಟ್ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ದೇಶ ದೇಶಗಳ ನಡುವೆ ಯುದ್ಧಗಳು ಪ್ರಾರಂಭವಾಗಿದ್ದ ಸಂದರ್ಭದಲ್ಲಿ ಎಲ್ಲೆಡೆ ಮಾನವ ಹಕ್ಕು ಉಲ್ಲಂಘನೆ ಪ್ರಾರಂಭವಾಗಿದ್ದವು. ಅಂದು ವಿಶ್ವ ಸಂಸ್ಥೆ ಮಾನವ ಹಕ್ಕು ಆಯೋಗ ವನ್ನು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿ ಎಂದು ರಚಿಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಮಾನವಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಜೊತೆಗೆ ರಕ್ಷಣೆ ಜಾಗೃತಿಯೂ ಮುಖ್ಯವಾಗಿದೆ. ಎಲ್ಲಾದರೂ ಮಾನವಹಕ್ಕು ಉಲ್ಲಂಘನೆಯಾದರೆ ಹೋರಾಟಕ್ಕಿಳಿಯುವುದು ಸರಿಯಲ್ಲ. ಸಮಸ್ಯೆ ಬಗ್ಗೆ ಅರಿತು ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಾನವ ಹಕ್ಕು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ನೇಮಕವನ್ನು ಘೋಷಣೆ ಮಾಡಲಾಯಿತು. ರಾಷ್ಟ್ರೀಯ ಉಪಾಧ್ಯಕ್ಷ ರಾಕೇಶ್ ಡಿ.ಆರ್, ರಾಷ್ಟ್ರೀಯ ಕಾರ್ಯದರ್ಶಿ ಮುರಳಿ ನಾಯ್ಡು, ಮಾನವಹಕ್ಕು ಆಯೋಗದ ಶಿವಮೊಗ್ಗ ಜಿಲ್ಲಾ ಸಮಿತಿ ಅಧ್ಯಕ್ಷ ಸಂತೋಷ್ ಬೆಲ್ಲೇಕೇರೆ, ದಿವೆಕರ್ ಕಾಲೇಜಿನ ಪ್ರಾಂಶುಪಾಲ ಬಿ. ಎಚ್. ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.





