ಕ್ರಮಕ್ಕೆ ಆಗ್ರಹಿಸಿ ಶಾಸಕರಿಗೆ ಮನವಿ
ಏಜೆನ್ಸಿಗಳಿಂದ ವೇತನ ತಾರತಮ್ಯ

ಕಾರವಾರ, ಜು.27: ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ನೌಕರರು ಶಾಸಕ ಸತೀಶ್ ಸೈಲ್ ಬಳಿ ಬುಧವಾರ ಕೋರಿಕೊಂಡರು.
ಶಾಸಕರು ಕೈಗಾ ಮಾರ್ಗವಾಗಿ ಹರೂರು ಗ್ರಾಮಕ್ಕೆ ಸಂಚರಿಸುವ ವಿಷಯ ತಿಳಿದ ಅಣು ವಿದ್ಯುತ್ ಸ್ಥಾವರದ ನೌಕರರು, ದಾರಿ ಮಧ್ಯೆ ಇರುವ ಚೆಕ್‌ಪೋಸ್ಟ್‌ನಲ್ಲಿ ಸಭೆ ನಡೆಸಿದರು.
ಮಾನವ ಸಂಪನ್ಮೂಲ ಪೂರೈಸುವ ಗುತ್ತಿಗೆ ಏಜೆನ್ಸಿಗಳ ಕಿರುಕುಳ, ವೇತನ ತಾರತಮ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ತಿಳಿಸಿದರು. ಕೈಗಾ ಅಣು ವಿದ್ಯುತ್ ಸ್ಥಾವರದ ಗುತ್ತಿಗೆ ನೌಕರರು ಹದಿನೈದು ವರ್ಷಗಳಿಂದ ದುಡಿಯುತ್ತಿದ್ದರೂ ಕಾರ್ಮಿಕರ ವೇತನ ಏರಿಕೆ ಮಾಡಿಲ್ಲ. ತಿಂಗಳು ಪೂರ್ತಿ ದುಡಿದರೆ 9 ಸಾವಿರ ರೂ. ವೇತನ ನೀಡಲಾಗುತ್ತಿದ್ದು, ರಜೆ ಸೌಲಭ್ಯ ಸರಿಯಾಗಿಲ್ಲ. ಕುಟುಂಬ ನಿರ್ವಹಣೆಗೆ ವೇತನ ಸಾಲುತ್ತಿಲ್ಲ ಎಂಬಿತ್ಯಾದಿ ಸಮಸ್ಯೆಗಳ ಬಗ್ಗೆ ಕೈಗಾದ ಅಧಿಕಾರಿಗಳ ಬಳಿ ದೂರಿದರು ಪ್ರಯೋಜನವಾಗುತ್ತಿಲ್ಲ ಅಲವತ್ತುಕೊಂಡರು. ದಿನವಿಡೀ ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿದರೂ ಪ್ರತಿ ತಿಂಗಳು ವೇತನ ಬರುತ್ತಿಲ್ಲ. ಹಲವು ಬಾರಿ ಎರಡ್ಮೂರು ತಿಂಗಳಿಗೆ ಒಮ್ಮೆ ವೇತನ ನೀಡಲಾಗುತ್ತದೆ. ನೌಕರರ ಸಮಸ್ಯೆ ಬಗ್ಗೆ ತಿಳಿಸಿದರೂ ಕೈಗಾದವರು ಸಹಾಯ ಮಾಡುತ್ತಿಲ್ಲ. ಹಲವು ಬಡವರು ಈ ಭಾಗದಲ್ಲಿ ದುಡಿಯುತ್ತಿದ್ದು, ಅವರಿಗೆ ಸಹಾಯವಾಗುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು.
ಈ ವೇಳೆ ಶಾಸಕರಿಗೆ ಮನವಿ ನೀಡಿದ ಕೈಗಾದ ವಾಹನ ಚಾಲಕರು, ತಮ್ಮ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿದರು. ಅಣುಶಕ್ತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಬಸ್ ಹಾಗೂ ಇನ್ನಿತರ ವಾಹನ ಚಾಲಕರನ್ನು ಕೌಶಲ್ಯರು ಎಂದು ಪರಿಗಣಿಸಿ ಕಡಿಮೆ ವೇತನ ನೀಡಲಾಗುತ್ತಿದೆ. ಇವರನ್ನು ಅತಿ ಕೌಶಲ್ಯರಂದು ಗುರುತಿಸಿ ವೇತನ ಏರಿಸಬೇಕು ಎಂದು ಆಗ್ರಹಿಸಿದರು. ಬಸ್‌ಗಳ ನಿರ್ವಹಣೆ ಸರಿಯಲ್ಲದ ಕಾರಣ ಸೂಕ್ತ ಹಾಗೂ ಹೆಚ್ಚುವರಿ ಬಸ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಕೈಗಾ ಹಾಗೂ ಸುತ್ತಲಿನ ಭಾಗಕ್ಕೆ ಕೆಎಸ್ಸಾರ್ಟಿಸಿ ಬಸ್ ಸೇವೆ ಸಮರ್ಪಕವಾಗಿಲ್ಲ. ಕೈಗಾ ಕೆರವಡಿ ಮಾರ್ಗವಾಗಿ ಬಸ್‌ಪಾಸ್‌ಗಳಿಗೆ ಅನುಮತಿ ನೀಡುತ್ತಿಲ್ಲ. ಈ ಹಿಂದೆ ನೀಡಿದ ಪಾಸ್‌ನ್ನು ರದ್ದು ಮಾಡಿದ್ದರಿಂದ ಪಾಸ್ ಪಡೆದು ಹಣ ಕೊಟ್ಟು ಸಂಚರಿಸುವ ಪರಿಸ್ಥಿತಿ ಬಂದಿದೆ ಎಂದರು. ಸಮಸ್ಯೆಗಳನ್ನು ಆಲಿಸಿದ ಶಾಸಕ ಸೈಲ್ ಶೀಘ್ರವೇ ಕೈಗಾ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರವೀಣ್ ರಾವ್, ಗಜಾನನ ನಾಯ್ಕ, ಆನಂದ ಪ್ರಶಾಂತ್ ನಾಯ್ಕ, ಕಿರಣ ಆಗೆಕರ್, ಪ್ರಮೋದ ಕದಂ, ಕಮಲಾಕಾಂತ ನಾಯ್ಕ ಸೇರಿದಂತೆ ನೂರಾರು ಜನರು ಹಾಜರಿದ್ದರು.







