ತ್ಯಾಜ್ಯ ನಿರ್ವಹಣೆಗೆ ಸರಳ ವಿಧಾನ ಪೈಪ್ ಕಾಂಪೋಸ್ಟ್

ಇತ್ತೀಚಿನ ದಿನಗಳಲ್ಲಿ ತ್ಯಾಜ್ಯದ ಸೂಕ್ತ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊಳೆಯುವ ಕಸ ಹಾಗೂ ಕೊಳೆಯದ ಕಸ ಎರಡನ್ನು ಮಿಶ್ರಣ ಮಾಡಿ ವಿಲೇವಾರಿ ಮಾಡುವುದರಿಂದ ತ್ಯಾಜ್ಯದ ಸೂಕ್ತ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಕಡೆ ಕಸವನ್ನು ಸುಡುವ ಹಾಗೂ ಮಣ್ಣಲ್ಲಿ ಹೂಳುವ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಇದು ಉತ್ತಮವಾದ ಅಭ್ಯಾಸ ಅಲ್ಲ. ಹೆಚ್ಚಿನ ಸಂದರ್ಭದಲ್ಲಿ ಸುಡುವ ಕಸದಲ್ಲಿ ಪ್ಲಾಸಿಕ್ ಮಿಶ್ರಣ ಇರುವುದರಿಂದ ವಿಷಕಾರಿ ಅನಿಲ ಪರಿಸರವನ್ನು ಸೇರಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಅಗಾಧ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸುಡುವುದರಿಂದ ವಾತಾವರಣದ ಉಷ್ಣತೆ ಏರಲು ಸಹ ಕಾರಣವಾಗುತ್ತದೆ. ಅಲ್ಲದೆ ತ್ಯಾಜ್ಯವನ್ನು ಪ್ಲಾಸ್ಟಿಕ್ ಸಮೇತ ಮಣ್ಣಲ್ಲಿ ಹೂಳುವುದರಿಂದ ಭೂಮಿ ಮುಂದೆ ಯಾವುದೇ ಕೃಷಿ ಉಪಯೋಗಕ್ಕೆ ಸಾಧ್ಯವಾಗುವುದಿಲ್ಲ. ಇದೇ ರೀತಿ ಮುಂದುವರಿದಲ್ಲಿ ಮುಂದೊಂದು ದಿನ ಪರಿಸರಕ್ಕೆ ಹಾನಿಯಾಗಿ ಮಾನವನಿಗೆ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕಯುಕ್ತ ಶುದ್ಧ ಗಾಳಿ, ಕುಡಿಯಲು ಶುದ್ಧವಾದ ನೀರು ಸಿಗುವುದು ಕಷ್ಟಸಾಧ್ಯವಾಗಲಿದೆ.
ಕಸದ ವೈಜ್ಞಾನಿಕ ವಿಲೇವಾರಿಗೆ ಕಸವನ್ನು ಮೂಲದಲ್ಲಿಯೇ ವಿಂಗಡಣೆ ಮಾಡುವುದು ಅನಿವಾರ್ಯ. ತ್ಯಾಜ್ಯವನ್ನು ಮುಖ್ಯವಾಗಿ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ಎಂದು ವಿಂಗಡಿಸಬಹುದಾಗಿದೆ. ದ್ರವ ತ್ಯಾಜ್ಯದ ಸೂಕ್ತ ವಿಲೇವಾರಿ ಅತ್ಯಂತ ಅವಶ್ಯವಾಗಿದೆ. ಸಾಮಾನ್ಯವಾಗಿ ಅಡುಗೆ ಮನೆಗಳಲ್ಲಿ ಉತ್ಪತ್ತಿಯಾಗುವ ಗಂಜಿ ತಿಳಿ, ಪಾತ್ರೆ ತೊಳೆದ ನೀರು, ಸ್ನಾನದ ಮನೆಯ ನೀರು, ಬಟ್ಟೆ ತೊಳೆದ ನೀರು ಇತ್ಯಾದಿಯನ್ನು ಹಾಗೇ ಪರಿಸರಕ್ಕೆ ಬಿಟ್ಟಲ್ಲಿ, ಅಲ್ಲಲ್ಲಿ ನೀರು ನಿಂತು ಸೊಳ್ಳೆ, ನೊಣ ಇತ್ಯಾದಿ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಬಹುದು. ಇಂತಹ ದ್ರವ ತ್ಯಾಜ್ಯಗಳನ್ನು ಇಂಗು ಗುಂಡಿಗಳ ಮೂಲಕ ಹಾಯಿಸುವುದರಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸಬಹುದು. ಅಲ್ಲದೇ ತರಕಾರಿ ಗಿಡಗಳಿಗೆ, ಹೂವಿನ ಗಿಡಗಳಿಗೆ, ಅಡಿಕೆ, ತೆಂಗು ಇತ್ಯಾದಿ ಗಿಡಗಳಿಗೆ ವ್ಯರ್ಥವಾಗಿ ಹರಿಯುವ ನೀರನ್ನು ಬಿಡುವ ಮೂಲಕ ನಿರ್ವಹಿಸಬಹುದಾಗಿದೆ. ತ್ಯಾಜ್ಯದ ವಿಂಗಡಣೆ: ಸೂಕ್ತ ನಿರ್ವಹಣೆಯ ಉದ್ದೇಶದಿಂದ ಘನ ತ್ಯಾಜ್ಯವನ್ನು ಈ ಕೆಳಗಿನಂತೆ ವಿಂಗಡಿಸಬಹುದು.
1.ಜೈವಿಕವಾಗಿ ಕೊಳೆಯುವ ತ್ಯಾಜ್ಯ ವಸ್ತುಗಳು (ಹಸಿ ಕಸ) ಮನೆ, ಅಂಗಡಿ, ಹೋಟೆಲ್‌ಗಳಿಂದ ಉತ್ಪತಿಯಾಗುವ ಕೊಳೆತ ತರಕಾರಿ, ಹಣ್ಣು, ಹೂವು, ಉಳಿದ ಆಹಾರ ಪದಾರ್ಥಗಳು ಕಾಗದ ಇತ್ಯಾದಿ.
2. ಜೈವಿಕವಾಗಿ ಕೊಳೆಯದ ತ್ಯಾಜ್ಯಗಳು (ಒಣ ಕಸ) ಮನೆ ಹಾಗೂ ವಾಣಿಜ್ಯ ಕೇಂದ್ರಗಳಿಂದ ಉತ್ಪತಿಯಾಗುವ ಪ್ಲಾಸ್ಟಿಕ್, ಬಲ್ಬು, ಗಾಜಿನ ಚೂರು, ಕಬ್ಬಿಣದ ತುಂಡು, ಸಿ.ಡಿ., ಬ್ಯಾಟರಿ ಇತ್ಯಾದಿ. ಜೈವಿಕವಾಗಿ ಕೊಳೆಯದ ಕಸವನ್ನು ಈ ಕೆಳಗಿನಂತೆ ಮತ್ತೆ ಎರಡು ರೀತಿಯಲ್ಲಿ ವಿಂಗಡಣೆ ಮಾಡಬಹುದು.
1.ಮರುಬಳಕೆ ಮಾಡಬಹುದಾದ ತ್ಯಾಜ್ಯಗಳು ಉಪಯೋಗಿಸಿ ವ್ಯರ್ಥವಾಗಿ ಬಿಸಾಡುವ ಪ್ಯಾಸ್ಟಿಕ್ ಚೀಲ, ಕಬ್ಬಿಣದ ತುಂಡು, ಗಾಜಿನ ಬಾಟಲಿ ಇತ್ಯಾದಿ.
2. ಮರುಬಳಕೆ ಸಾಧ್ಯವಿಲ್ಲದ/ಅಪಾಯಕಾರಿ ನಿರುಪಯುಕ್ತ ತ್ಯಾಜ್ಯಗಳು. ಒಮ್ಮೆ ಉಪಯೋಗಿಸಿ ಮತ್ತೊಮ್ಮೆ ಬಳಕೆಗೆ ಸಾಧ್ಯವಿಲ್ಲದ ಗಾಜಿನ ಚೂರು, ಬಲ್ಬು, ಬ್ಯಾಟರಿ, ಸಿ.ಡಿ ಇತ್ಯಾದಿ. ಈ ರೀತಿಯಾಗಿ ಕಸವನ್ನು ಅದರ ಮೂಲದಲ್ಲ್ಲಿಯೇ ವಿಂಗಡಣೆ ಮಾಡಿದರೆ ಜೈವಿಕವಾಗಿ ಕೊಳೆಯುವ ತ್ಯಾಜ್ಯವನ್ನು ಪೈಪ್ ಕಾಂಪೋಸ್ಟ್ ವಿಧಾನದ ಮೂಲಕ ಮನೆಯ ಹಂತದಲ್ಲಿಯೇ ನಿರ್ವಹಣೆ ಮಾಡಬಹುದಾಗಿದೆ.
ಏನಿದು ಪೈಪ್ ಕಾಂಪೋಸ್ಟ್?
ಕಡಿಮೆ ಜಾಗ, ಕಡಿಮೆ ಖರ್ಚಿನಲ್ಲಿ ಹಸಿ ಕಸವನ್ನು ಅದರ ಮೂಲದಲ್ಲಿಯೇ ಪೈಪ್ ಮೂಲಕ ನಿರ್ವಹಣೆ ಮಾಡಬಹುದಾದ ಸರಳ ವಿಧಾನವೇ ಪೈಪ್ ಕಾಂಪೋಸ್ಟ್. ಈ ವಿಧಾನದ ಮೂಲಕ ವ್ಯರ್ಥವಾಗಿ ಎಸೆದು ಅನಾರೋಗ್ಯ ಉಂಟು ಮಾಡುವ ಹಸಿ ತ್ಯಾಜ್ಯವನ್ನು ಉತ್ತಮ ರಸಗೊಬ್ಬರವಾಗಿ ಪರಿವರ್ತಿಸಬಹುದು.
ಅಳವಡಿಸುವ ವಿಧಾನ: 6 ಇಂಚು ದಪ್ಪ 6 ಅಡಿ ಎತ್ತರದ ಒಂದು ಸಿಮೆಂಟ್ ಅಥವಾ ಪಿ.ವಿ.ಸಿ ಪೈಪ್ ಅನ್ನು ಒಂದೂವರೆ ಅಡಿ ಆಳದಲ್ಲಿ ನೆಡಬೇಕು(ಅಗತ್ಯಕ್ಕೆ ತಕ್ಕಂತೆ ಪೈಪ್ ಗಾತ್ರದಲ್ಲಿ ವ್ಯತ್ಯಾಸ ಮಾಡಿಕೊಳ್ಳಬಹುದು). ಪೈಪ್‌ನ ಒಳಗೆ ಕಸ ಹಾಕುವ ಮೊದಲು 1 ಕೆ.ಜಿ. ಬೆಲ್ಲ ಮತ್ತು ಸೆಗಣಿ ನೀರನ್ನು ಪೈಪ್‌ನ ಒಳಗೆ ಹಾಕಬೇಕು (ಕಾರಣ ಜೈವಿಕ ಹುಳಗಳು ಉತ್ಪತಿಯಾಗುತ್ತವೆ). ನಂತರ ತಮ್ಮ ಮನೆಗಳಲ್ಲಿ ದಿನ ನಿತ್ಯ ಉತ್ಪತಿಯಾಗುವ ಬೇಡವಾದ ಜೈವಿಕ ಹಸಿಕಸವನ್ನು ಹಾಕಬೇಕು. ಪ್ಲಾಸ್ಟಿಕ್ ಸೇರಿದಂತೆ ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್‌ನ ಒಳಗೆ ಹಾಕಬಾರದು, ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣನ್ನು ಪೈಪ್‌ನ ಒಳಗೆ ಹಾಕಬೇಕು. ಪೈಪ್ ನ ಮೇಲ್ಭಾಗ ಮರದ ತುಂಡು ಅಥವಾ ಹಂಚಿನಿಂದ ಮುಚ್ಚಬೇಕು, ಅನುಕೂಲಕ್ಕೆ ತಕ್ಕಂತೆ 2-3 ಪೈಪ್‌ಗಳನ್ನು ಬಳಸುವುದು ಉತ್ತಮ. ಪೈಪ್‌ಗಳನ್ನು ಸುಲಭವಾಗಿ ತಲುಪುವಂತೆ ಅಡುಗೆ ಮನೆಯ ಹತ್ತಿರ ನೆಡಬೇಕು.
ಯಾವ ಕಸವನ್ನು ಹಾಕಬಹುದು?: ತರಕಾರಿಗಳ ಸಿಪ್ಪೆ, ಕೊಳೆತ ತರಕಾರಿ, ಕೊಳೆತ ಹಣ್ಣುಗಳು, ಹಣ್ಣುಗಳ ಸಿಪ್ಪೆ, ಹೂವುಗಳು, ಉಳಿದ ಆಹಾರ ಪದಾರ್ಥಗಳು- ಚಾಹುಡಿ, ಹಳಸಿದ ಅನ್ನ, ಸಾಂಬಾರು ಇತ್ಯಾದಿ, ಮೊಟ್ಟೆ, ಮೀನು, ಮಾಂಸಾಹಾರ ತ್ಯಾಜ್ಯ, ಕೈ ತೋಟದ ಹುಲ್ಲು, ಎಲೆಗಳು, ಮನೆ ಗುಡಿಸಿದ ಕಸ, ಸಾಕು ಪ್ರಾಣಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ, ಕಾಗದ ಇತ್ಯಾದಿ. ಪ್ಲಾಸ್ಟಿಕ್ ಸೇರಿದಂತೆ ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್‌ನ ಒಳಗೆ ಹಾಕಬಾರದು.
ಉಪಯೋಗ ಏನು?
ಈ ವಿಧಾನದ ಮೂಲಕ ತ್ಯಾಜ್ಯವನ್ನು ಅದರ ಮೂಲದಲ್ಲಿಯೇ ನಿರ್ವಹಣೆ ಸಾಧ್ಯ ಇದರಿಂದಾಗಿ ಸಾರ್ವಜನಿಕ ಬೀದಿಯಲ್ಲಿ ಕಸ ವನ್ನು ಎಸೆದು ಸಾರ್ವಜನಿಕರಿಗೆ ತೊಂದರೆ ಆಗುವುದು ತಪ್ಪುತ್ತದೆ. ಅಲ್ಲದೆ ವ್ಯರ್ಥ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಹೂವು ತರಕಾರಿ ಗಿಡಗಳಿಗೆ ಬಳಸಬಹುದು, ಮೀನು ಮಾಂಸದ ತ್ಯಾಜ್ಯವನ್ನು ಕೆಟ್ಟ ವಾಸನೆ ಬೀರದಂತೆ ವಿಲೇವಾರಿ ಮಾಡಲು ಸಾಧ್ಯವಿದೆ, ಕಸವನ್ನು ಮುಚ್ಚಿದ ಪೈಪ್ ಒಳಗೆ ಹಾಕುವುದರಿಂದ ಸೊಳ್ಳೆ, ನೊಣ, ಕ್ರಿಮಿ ಕೀಟಗಳಿಂದ ಮುಕ್ತಿ ಸಿಗುತ್ತದೆ ಹಾಗೂ ಆರೋಗ್ಯ ಪೂರ್ಣ ಸ್ವಚ್ಛ ಪರಿಸರ ನಮ್ಮದಾಗುತ್ತದೆ. ಈ ರೀತಿಯಾಗಿ ನಮ್ಮ ಮನೆಯ ಕಸವನ್ನು ಅದರ ಮೂಲದಲ್ಲಿಯೇ ವಿಂಗಡಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರಿಂದ ತ್ಯಾಜ್ಯದ ಬಹಳಷ್ಷು ಸಮಸ್ಯೆಗೆ ಮುಕ್ತಿ ಸಿಗುತ್ತದೆ. ತ್ಯಾಜ್ಯದ ಸಮಸ್ಯೆಗೆ ಸರಕಾರವನ್ನು ದೂರುವ ಬದಲು ನಮ್ಮ ಮನೆಯ ಕಸದ ನಿರ್ವಹಣೆ ಜವಾಬ್ದಾರಿಯನ್ನು ನಾವೇ ನಿರ್ವಹಿಸಿದರೆ ಸ್ವಚ್ಛ ಭಾರತ ನಿರ್ಮಾಣ ಸಾಧ್ಯ.







