ಪರಿಸರ ಉಳಿಸಿ, ಬೆಳೆಸಲು ಮುಂದಾಗಿ: ನ್ಯಾ. ಉಷಾರಾಣಿ
ವನಮಹೋತ್ಸವ, ಕಾನೂನು ಅರಿವು ಕಾರ್ಯಕ್ರಮ

ಸೊರಬ, ಜು. 27: ಪ್ರಕೃತಿ ಸಹಜವಾಗಿ ನೀಡಿದ ಪರಿಸರವನ್ನು ಸ್ವಾರ್ಥಕ್ಕಾಗಿ ಬಳಸಿರುವ ಪರಿಣಾಮ ಇಂದು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಜೆಎಂಫ್‌ಸಿ ಹಿರಿಯ ವಿಭಾಗದ ನ್ಯಾಯಾಧೀಶರಾದ ಉಷಾರಾಣಿ ಹೇಳಿದರು.
ಪಟ್ಟಣದ ಮೆಟ್ರಿಕ್ ನಂತರದ ಸರಕಾರಿ ಬಾಲಕಿಯರ ವಸತಿ ನಿಲಯದಲ್ಲಿ ತಾಲೂಕು ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಪರಿಸರ ಜಾಗೃತಿ ಟ್ರಸ್ಟ್, ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ವನಮಹೋತ್ಸವ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಳೆಯ ಆಕರ್ಷಣೆಗೆ ನೆರವಾಗುವ ಹಸಿರು ಅರಣ್ಯ ನಾಶಕ್ಕೆ ಪೈಪೋಟಿ ನಡೆದಿರುವ ಸಂದಭರ್ ಗಮನಿಸಿದರೆ, ಮುಂದೊಮ್ಮೆ ಇವತ್ತು ಮೊಬೈಲ್‌ಗೆ ಕರೆನ್ಸಿ ಹಾಕಿಸುವಂತೆ ಕುಡಿಯುವ ನೀರಿಗೂ ಕರೆನ್ಸಿ ಹಾಕಿಸುವಂತಾಗಬಹುದು ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣವಿಲ್ಲದ ಪರಿಣಾಮ ಪರಿಸರ ಸಮತೋಲನಕ್ಕೆ ನೆರವಾಗುವ ಅನೇಕ ಜೀವಿಗಳ, ವನಗಳ ನಾಶಕ್ಕೆ ಕಾರಣವಾಗಿದೆ ಎಂದರು.
ಪರಿಸರದ ಸಮತೋಲನದ ಕುರಿತಂತೆ ಮುಂದಿನ ಪೀಳಿಗೆಯು ಈಗಲೇ ಎಚ್ಚರವಹಿಸಿ, ಇರುವ ಪರಿಸರದ ಉಳಿವಿಗಾದರೂ ಮುಂದಾಗಬೇಕು. ಸ್ವಚ್ಛ ಗಾಳಿ, ನೀರಿಗೆ ನಿಮ್ಮ ಸುತ್ತಮುತ್ತಲ ಪರಿಸರವನ್ನು ಉಳಿಸಿ, ಬೆಳೆಸಿ ಎಂದು ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್ ಮಾತನಾಡಿ, ಇಡೀ ಭೂಮಿಯ ಸಮತೋಲನಕ್ಕೆ, ಜೀವಿಯ ಇರುವಿಕೆಗೆ ನೆರವಾಗಿರುವ ಪಶ್ಚಿಮಘಟ್ಟವು ನಾಶವಾದರೆ, ಮಾನವನೊಂದಿಗೆ ಸಕಲ ಜೀವಿಯ ನಾಶವೂ ಶತಸಿದ್ಧ, ಮಳೆ ಬೀಳುವ ದಿನಗಳಲ್ಲಿ ನೆತ್ತಿ ಸುಡುವ ಬಿಸಿಲಿನ ಧಗೆ ಎದುರಿಸುತ್ತಿರುವ ಮಲೆನಾಡಿಗರಿಗೆ ಇನ್ನೂ ಪರಿಸರದ ಮಹತ್ವ ತಿಳಿದಿಲ್ಲ. ಅತೀ ಹೆಚ್ಚು ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನಲ್ಲಿ ಕೆರೆಗೆ ನೀರಿರಲಿ, ಕುಡಿಯುವ ನೀರಿಗೂ ಆಕಾಶ ನೋಡುವಂತಾಗಿದೆ. ಪ್ರಸ್ತುತ ನಮ್ಮ ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿ ತನದಿಂದ ಉಂಟಾಗಿರುವ ಇಂತಹ ವಿಕೋಪಕ್ಕೆ ಮೊದಲ ಬಲಿ ಜನಸಾಮಾನ್ಯರು ಎಂಬುದನ್ನು ಮರೆಯುವಂತಿಲ್ಲ ಎಂದರು.
ಆಧುನಿಕ ಯುಗದಲ್ಲಿರುವ ನಾವು ಎಷ್ಟೇ ವೈಜ್ಞ್ಞಾನಿಕವಾಗಿ ಮುಂದುವರಿದಿದ್ದರೂ ಪ್ರಾಕೃತಿಕ ರಕ್ಷಣೆಯಲ್ಲಿ ಸೋತಿದ್ದೇವೆ. ಮುಖ್ಯವಾಗಿ ಪರಿಸರ ಸಮತೋಲನದ ಕುರಿತು ವೈಜ್ಞಾನಿಕ ಚಿಂತನೆ ನಡೆಯಬೇಕು ಎಂದರು.
ಈ ಸಂದಭರ್ದಲ್ಲಿ ಕಿರಿಯ ವಿಭಾಗದ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಪುಷ್ಪಲತಾ ಬಾವಿಮಠ್, ವಲಯಾರಣ್ಯಾಧಿಕಾರಿ ಎಂ.ಎಸ್.ಅಜೆಯ್‌ಕುಮಾರ್, ಉಪವಲಯಾರಣ್ಯಾಧಿಕಾರಿ ಕೆ.ಸತ್ಯನಾರಾಯಣ, ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ವಸತಿ ನಿಲಯದ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.







