ಶಿಕ್ಷಕರನ್ನು ವರ್ಗಾವಣೆ ಮಾಡದಂತೆ ಒತ್ತಯಿಸಿ ಧರಣಿ

ಕಡೂರು, ಜು.27: ಹೆಚ್ಚುವರಿ ಶಿಕ್ಷಕರನ್ನು ಶಾಲೆಯಲ್ಲಿ ಉಳಿಸುವಂತೆ ಆಗ್ರಹಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳು ಆರು ಜನ ಶಿಕ್ಷಕರನ್ನು ಶಾಲೆಯ ಕಚೇರಿಯ ಕೊಠಡಿಯಲ್ಲಿ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಪಟ್ಟಣದ ವೆಂಕಟೇಶ್ವರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಾಲೆಯ ಬಳಿ ಸೇರಿದ ಪೋಷಕರು ಈ ಶಾಲೆಯಲ್ಲಿ ಒಂದರಿಂದ ಏಳನೆ ತರಗತಿವರೆಗೆ 121 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಆರು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 2012-13ನೆ ಸಾಲಿನಿಂದ ಈ ಶಾಲೆಯಲ್ಲಿ ಆರು ಮತ್ತು ಏಳನೆ ತರಗತಿಯಲ್ಲಿ ಆಂಗ್ಲಮಾಧ್ಯಮವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭ ಅಕ್ಷರ ದಾಸೋಹ ಕಾರ್ಯದರ್ಶಿ ಸ್ವಪ್ನಾ ಮಾತನಾಡಿ, ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಈ ಶಾಲೆಯಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರು ಉತ್ತಮವಾಗಿ ಬೋಧನೆ ಮಾಡುತ್ತಾರೆ.ಆದರೆ ಸರಕಾರ ಈಗ ಈ ಶಾಲೆಯ ಎರಡು ಜನ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆ ಮಾಡಲು ಕೌನ್ಸೆಲಿಂಗ್ ಕರೆದಿದ್ದು, ಇದರ ವಿರುದ್ಧ್ದ ಶಿಕ್ಷಕರನ್ನು ಕೂಡಿಹಾಕಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಶಿಕ್ಷಕರನ್ನು ಕೂಡಿಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠೇಶ್ವರ್ ಪೋಷಕರ ಮನವೊಲಿಸಿ ಬೀಗವನ್ನು ತೆಗೆಸಿ ಶಿಕ್ಷಕರನ್ನು ಬಂಧಮುಕ್ತಗೊಳಿಸಿದರು.
ನಂತರ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ರೀತಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ. ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅಣ್ಣಪ್ಪ, ಜಲಜಾ, ಸದಸ್ಯೆ ಮಂಜುಳಾ, ಲಕ್ಷ್ಮೀ, ಎನ್.ಪ್ರದೀಪ್, ರೂಪಾ, ಜಯಶ್ರೀ, ಚಂದ್ರಕಲಾ, ರೇಖಾ ಹಾಗೂ ಪೋಷಕರು ಪಾಲ್ಗೊಂಡಿದ್ದರು.







