ಡಿವೈಎಸ್ಪಿ ಕಲ್ಲಪ್ಪಆತ್ಮಹತ್ಯೆ ಪ್ರಕರಣ
ಆರೋಪಿಗಳನ್ನು ಬಂಧಿಸುವಂತೆ ಕರವೇ ಧರಣಿ

ಚಿಕ್ಕಮಗಳೂರು,ಜು.27: ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮತ್ತು ತೇಜಸ್‌ಗೌಡ ಅಪಹರಣ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸುವುದರ ಜೊತೆಗೆ ಜಿಲ್ಲೆಯಲ್ಲಿ ನಿರಂತರವಾಗಿರುವ ಇಸ್ಪಿಟ್ ಹಾಗೂ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಧರಣಿ ನಡೆಸಿದರು.
ತಾಲೂಕು ಅಧ್ಯಕ್ಷ ಮನೋಜ್ ಶೆಟ್ಟಿ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹನುಮಂತಪ್ಪ ವೃತ್ತದ ಬಳಿ ಬಸವನಹಳ್ಳಿ ಮುಖ್ಯ ರಸ್ತೆ ಮತ್ತು ಕೆ.ಎಂ.ರಸ್ತೆಯಲ್ಲಿ ಧರಣಿ ನಡೆಸಿದರು.
ಈ ಸಂದಭರ್ದಲ್ಲಿ ಮಾತನಾಡಿದ ಮನೋಜ್ ಶೆಟ್ಟಿ, ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರು ಹಿಂದುಳಿದ ಹಾಗೂ ಬಡ ಕುಟುಂಬದಿಂದ ಬಂದ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿದ್ದು, ಅವರ ವಿರುದ್ಧ ಇದುವರೆಗೆ ಯಾವುದೇ ಆರೋಪಗಳು ಬಂದಿರಲಿಲ್ಲ ಎಂದರು.
ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ ಹಂಡಿಬಾಗ್ ಅವರನ್ನು ಅಪಹರಣ ಪ್ರಕರಣದಲ್ಲಿ ಸಿಲುಕಿಸಿ ಬಲಿಪಶು ಮಾಡಲಾಗಿದೆ.ಇದರಿಂದ ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣದ ಹಿಂದೆ ಹಲವರ ಷಡ್ಯಂತ್ರ ಮತ್ತು ಪಿತೂರಿ ಇದೆ ಎಂದು ಆರೋಪಿಸಿದರು.
ಎರಡೂ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಬೇಕು. ಅದರ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಯಲಿಗೆಳೆದು ಮುಲಾಜಿಲ್ಲದೆ ಅವರನ್ನು ಬಂಧಿಸಬೇಕು. ಕಲ್ಲಪ್ಪ ಹಂಡಿಬಾಗ್ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.







