ಕಾಡಾನೆಗಳ ಹಾವಳಿ: ಶಾಶ್ವತ ಪರಿಹಾರಕ್ಕೆ ಒತ್ತಾಯ

ಮೂಡಿಗೆರೆ, ಜು.27: ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಕಂಗೆಟ್ಟಿದ್ದು, ಬೆಳೆದ ಬೆಳೆಗಳು ಹಾಳಾಗುತ್ತಿರುವ ಪರಿಣಾಮ ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರ ನೀಡುವಂತೆ ಶಾಸಕ ಬಿ.ಬಿ.ನಿಂಗಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಬೆಳೆಗಳ ಹಾನಿ ನಡೆದ ತ್ರಿಪುರ,ಬೆಟ್ಟಗೆರೆ,ಬಿದರಹಳ್ಳಿ, ಬಾಳೆಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಕಾಡಾನೆಗಳನ್ನು ಅಟ್ಟುವ ಬದಲು ಸ್ಥಳಾಂತರಗೊಳಿಸಿದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ಸಲಗವೊಂದು ಓಡಾಡುತ್ತಿದ್ದು ಯಾವ ಕ್ಷಣದಲ್ಲೂ ತುಳಿಯುವ ಸಾಧ್ಯತೆಗಳೇ ಅಧಿಕವಾಗಿದ್ದು, ತೋಟಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತೋಟದಲ್ಲಿ ಕೆಲಸ ಮಾಡದಿದ್ದರೆ ಸಂಬಳವು ಇಲ್ಲಾ ಹೊಟ್ಟೆ ಅನ್ನವು ಇಲ್ಲದಂತಾಗಿದೆ. ನಮ್ಮ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ತೋಟಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಕೂಲಿ ಕಾರ್ಮಿಕರು ತಮ್ಮ ಅಳಲನ್ನು ಶಾಸಕರ ಮುಂದೆ ತೋಡಿಕೊಂಡರು.
ಶಾಸಕರು ಗ್ರಾಮಸ್ಥರಿಗೆ ಸಮಾಧಾನ ಪಡಿಸಿ ಅರಣ್ಯ ಸಚಿವ ರಮಾನಾಥ ರೈ ಅವರು ಜು.28 ಮತ್ತು 29ರಂದು ಮೂಡಿಗೆರೆಗೆ ಆಗಮಿಸಲಿದ್ದು, ಅವರೊಂದಿಗೆ ಮಾತುಕತೆ ನಡೆಸಿ ಆನೆ ಹಾವಳಿ ಬಗ್ಗೆ ವಿವರಣೆ ನೀಡಿ ಶಾಶ್ವತ ಪರಿಹಾರ ಒದಗಿಸುವಂತೆ ಸರಕಾರವನ್ನು ಒತ್ತಾಯಿಸುವುದಾಗಿ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಸಚಿವರಿಗೆ ವಿವರಣೆ ನೀಡುವಂತೆ ತಿಳಿಸಿದರು.ನಂತರ ಆನೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ರಂಜನ್ ಅಜಿತ್ ಕುಮಾರ್, ಉದಯ ಕುಮಾರ್, ಕೆಜಿಎಫ್ ಅಧ್ಯಕ್ಷ ಬಿ.ಎಸ್.ಜೈರಾಂ ಮತ್ತಿತರರು ಉಪಸ್ಥಿತರಿದ್ದರು.







