ಅಗತ್ಯ ಸಿದ್ಧತೆಗೆ ಡಿಸಿ ಡಾ.ರಿಚರ್ಡ್ ಸೂಚನೆ
ಜಿಲ್ಲಾ ನೀರಾವರಿ ಯೋಜನೆ ಅನುಷ್ಠಾನ

ಮಡಿಕೇರಿ, ಜು. 27 : ಜಿಲ್ಲಾ ನೀರಾವರಿ ಯೋಜನೆಯ ಅಂತಿಮ ವರದಿಯನ್ನು ಆ.15 ರೊಳಗೆ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜಿಲ್ಲಾ ನೀರಾವರಿ ಯೋಜನೆಯ ಸಮಗ್ರ ವರದಿಯನ್ನು ತಕ್ಷಣ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ನೀರಾವರಿ ಯೋಜನಾ ಸಿದ್ಧತೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ನೀರಾವರಿ ಯೋಜನೆ ಮಹತ್ವಾಕಾಂಕ್ಷಿಯದ್ದಾಗಿದೆ. ಈ ಸಂಬಂಧ ದೂರದೃಷ್ಟಿ ಅರಿತು ನಿಖರ ಮಾಹಿತಿ ನೀಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಪಶುಪಾಲನೆ, ತೋಟಗಾರಿಕೆ, ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ಜಿಪಂ ಇಂಜಿನಿಯರಿಂಗ್ ವಿಭಾಗ, ಬೃಹತ್ ನೀರಾವರಿ, ಸಣ್ಣ ನೀರಾವರಿ, ಕಾಫಿ ಮಂಡಳಿ ಹೀಗೆ ನಾನಾ ಇಲಾಖೆಗಳು ತಮ್ಮ ಇಲಾಖಾ ವ್ಯಾಪ್ತಿಯ ಮಾಹಿತಿಗಳನ್ನು ಒದಗಿಸಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಹೈನುಗಾರಿಕೆಗೆ ವಿಫುಲ ಅವಕಾಶವಿದೆ. ಆದರೂ ಹೈನುಗಾರಿಕೆಯಲ್ಲಿ ಜಿಲ್ಲೆ ಹಿಂದೆ ಉಳಿಯಲು ಕಾರಣವೇ
ನು ಎಂಬುದರ ಬಗ್ಗೆ ಅವಲೋಕನ ಮಾಡಬೇಕಿದೆ. ಈ ಸಂಬಂಧ ಪಶುಪಾಲನಾ ಇಲಾಖೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಮಂಡಳದ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಇದೇ ಸಂದರ್ಭ ತಿಳಿಸಿದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಜಿಲ್ಲಾ ನೀರಾವರಿ ಯೋಜನೆ ಸಿದ್ಧತೆ ಸಂಬಂಧ ನಿಗದಿತ ನಮೂನೆಯಲ್ಲಿ ನಿಖರ ಹಾಗೂ ಸ್ಪಷ್ಪ ಮಾಹಿತಿಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳನ್ನು ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಪ್ಪಅವರು ಮಾತನಾಡಿ, ಜಿಲ್ಲಾ ನೀರಾವರಿ ಯೋಜನೆ ಸಂಬಂಧ ಹಲವು ಇಲಾಖೆಗಳು ಈಗಾಗಲೇ ಮಾಹಿತಿ ಒದಗಿಸಿವೆ. ಇನ್ನು ಕೆಲವು ಇಲಾಖೆಗಳು ಮಾಹಿತಿ ಒದಗಿಸಬೇಕಿದೆ. ಈ ಸಂಬಂಧ ಸಮಗ್ರ ಯೋಜನೆ ರೂಪಿಸಲು ಅಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನೀಡುವಂತೆ ಅವರು ಮನವಿ ಮಾಡಿಕೊಂಡರು.
ನಬಾರ್ಡ್‌ನ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಮಾತನಾಡಿ, ಜಿಲ್ಲಾ ನೀರಾವರಿ ಯೋಜನೆಯು ಜಿಲ್ಲೆಯ ಸಮಗ್ರ ಹಾಗೂ ಮಹತ್ವದಾಯಕ ಯೋಜನೆಯಾಗಿದೆ.ಉತ್ತಮ ವರದಿ ತಯಾರಿಸಲು ಆಗಸ್ಟ್ ಅಂತ್ಯದವರೆಗೆ ಕಾಲಾವಕಾಶ ನೀಡುವಂತೆ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. ಹೈನುಗಾರಿಕೆ ಉತ್ತೇಜನ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹಾಲಿನ ಮಾರಾಟ ಮತ್ತು ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಜಿಲ್ಲೆಯ ಕೃಷಿಕರು ಹೈನುಗಾರಿಕೆಗೆ ಮುಂದೆ ಬರುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸಿ. ನಾಗರಾಜು, ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಗಿರೀಶ್, ಜಿಪಂ ಇಂಜಿನಿಯರ್‌ಗಳಾದ ಶಶಿಧರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪದ್ಮಶೇಖರ ಪಾಂಡೆ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್, ಬೃಹತ್ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಧರ್ಮರಾಜು, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್, ತಾಂತ್ರಿಕ ಅಧಿಕಾರಿ ಗಿರೀಶ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.







