ಹಲವು ಕಳ್ಳತನ ಪ್ರಕರಣಗಳ 8 ಜನರ ಬಂಧನ
ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಯಶಸ್ವಿ ಕಾರ್ಯಾಚರಣೆ

ಮಡಿಕೇರಿ, ಜು. 27: ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿ ಸಿದಂತೆ ಎಂಟು ಮಂದಿ ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಒಟ್ಟು 27. 43 ಲಕ್ಷ ರೂ. ವೌಲ್ಯದ ಸ್ವತ್ತುಗಳು ಹಾಗೂ ನಗದನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಬಂಧಿತರನ್ನು ಹರೀಶ್, ಸೋನು, ರಾಜೇಶ್, ರಮೇಶ, ಕಾರ್ಯಪ್ಪ, ಶಿವು, ಗಣೇಶ, ರವಿ ಎಂದು ಗುರುತಿಸಲಾಗಿದ್ದು, ಮಾದೇಶ ಮತ್ತು ಸಂತೋಷ್ ತಲೆಮರೆಸಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಪಿ. ರಾಜೇಂದ್ರ ಪ್ರಸಾದ್, ಜು.26 ರಂದು ಮಧ್ಯಾಹ್ನ 3:30ರ ಸುಮಾರಿಗೆ ಕುಶಾಲನಗರದ ಕೊಪ್ಪಗೇಟ್‌ನ ಫಾರೆಸ್ಟ್ ಚೆಕ್‌ಪೋಸ್ಟ್ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಗೊಂಡು ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೆ, ಅದರಲ್ಲಿದ್ದ ಐವರನ್ನು ವಶಕ್ಕೆ ಪಡೆಯಲು ಸಿಬ್ಬಂದಿ ಯತ್ನಿಸಿದರಾದರೂ ಮೂವರು ತಪ್ಪಿಸಿ ಕೊಂಡು ಸಹೋದರರಾದ ಹರೀಶ್ ಹಾಗೂ ಸೋನು ಎಂಬವರನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ ಹಾಗೂ ಸಲಕರಣೆಗಳು ಸೇರಿದಂತೆ ಸುಮಾರು 2.5 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಅವರನ್ನು ತೀವ್ರ ವಿಚಾರಣೆ ನಡೆಸಿದ ಪರಿಣಾಮ ಕಳವು ಪ್ರಕರಣಗಳು ಬೆಳಕಿಗೆ ಬಂದಿತು ಎಂದು ಮಾಹಿತಿ ನೀಡಿದರು.
ವಶದಲ್ಲಿದ್ದ ಆರೋಪಿ ಸಹೋದರರು ನೀಡಿದ ಮಾಹಿತಿಯ ಆಧಾರದಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಪೊಲಿಸರು ಕಾರ್ಯಾಚರಣೆ ನಡೆಸಿ ಉಳಿದ ಐದು ಮಂದಿ ಆರೋಪಿಗಳನ್ನು ಪಡೆದಿದ್ದಾರೆ. ಪ್ರಕರಣಗಳಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಬಂಧಿತರಿಂದ ಗೋಣಿಕೊಪ್ಪಎಪಿಎಂಸಿ ಯಾರ್ಡ್‌ನ ಜತಿನ್ ಎಂಬವರ ಮಳಿಗೆಯಿಂದ ಕಳವು ಗೈಯ್ಯಲಾಗಿದ್ದ 50 ಕೆಜಿ ತೂಕದ ಸುಮಾರು 8.8 ಲಕ್ಷ ರೂ. ವೌಲ್ಯದ ಕಾಳು ಮೆಣಸು, 10 ಸಾವಿರ ರೂ. ವೌಲ್ಯದ ಲ್ಯಾಪ್ ಟಾಪ್, 6. 46 ಲಕ್ಷ ರೂ. ನಗದು ಪೈಕಿ 46, 500 ರೂ. ಹರೀಶ್ ಹಾಗೂ ಸೋನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಪೊನ್ನಂಪೇಟೆಯ ಚೆಪ್ಪುಡಿರ ಉಮೇಶ್ ಎಂಬವರ ಗೋದಾಮಿನಿಂದ ಕಳವು ಮಾಡಲಾಗಿದ್ದ ಸುಮಾರು 5. 60 ಲಕ್ಷ ವೌಲ್ಯದ ಕಾಳು ಮೆಣಸನ್ನು ಮಾರಾಟ ಮಾಡಿ ಖರೀದಿಸಿದ್ದ 96 ಸಾವಿರ ರೂ. ವೌಲ್ಯದ ಟಿವಿಎಸ್ ಅಪಾಜೆ ಬೈಕ್, 61 ಸಾವಿರ ರೂ. ವೌಲ್ಯದ ಟಿವಿಎಸ್ ಮೋಟಾರು ಸೈಕಲ್, 68 ಸಾವಿರದ ಕರಿಷ್ಮಾ ಮೋಟಾರ್ ಸೈಕಲ್ ಮತ್ತು ಕೃತ್ಯಕ್ಕೆ ಬಳಸಲಾದ ಮ್ಯಾಗ್‌ಜಿವಾ ವಾಹನಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ವೀರಾಜಪೇಟೆ ನಗರದ ಬಿ.ಎಂ. ಅರುಣ ಎಂಬವರ ವಿಮಲೇಷ್ ಜ್ಯುವೆಲ್ಲರ್ಸ್‌ನಿಂದ ಕಳವು ಮಾಡಲಾಗಿದ್ದ 1 ಲಕ್ಷ ರೂ. ವೌಲ್ಯದ 2.5 ಕೆಜಿ ಬೆಳ್ಳಿ, ನಳಿನಿ ಆಲಿಯಾಸ್ ನಂಜಮ್ಮ ಅವರ ಮನೆಯಿಂದ ಕಳವು ಮಾಡಿದ್ದ 38 ಸಾವಿರ ರೂ. ವೌಲ್ಯದ ಟಿ.ವಿ, ಗೋಣಿಕೊಪ್ಪದ ಫಝಲ್ ಎಂಬವರ ಅಂಗಡಿಯಿಂದ ಕಳವು ಮಾಡಲಾಗಿದ್ದ 19, 500 ರೂ. ವೌಲ್ಯದ 20 ಕೆಜಿ ಕಾಳು ಮೆಣಸು, 40 ಕೆಜಿ ಕಾಫಿ ಬೀಜ ಮತ್ತು ವಾಲ್ ಫ್ಯಾನ್, ಹೆಬ್ಬಾಲೆಯ ಲೊಕೇಶ್ ಅವರ ಮೊಬೈಲ್ ಅಂಗಡಿಯಿಂದ ಕಳವು ಮಾಡಲಾಗಿದ್ದ ಸುಮಾರು 10 ಸಾವಿರ ವೌಲ್ಯದ 6 ಮೊಬೈಲ್‌ಗಳು ಮತ್ತು 1,500 ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ಹೀರೋಹೊಂಡಾ ಮೋಟಾರ್ ಸೈಕಲ್‌ನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದರು.
20 ಸಾವಿರ ರೂ. ಬಹುಮಾನ
ಕರ್ತವ್ಯ ಪ್ರಜ್ಞೆ ತೋರಿದ ಕುಶಾಲನಗರ ಠಾಣೆಯ ಸಿಬ್ಬಂದಿಗಳಾದ ಲೋಕೇಶ್, ಹೋಂಗಾರ್ಡ್ ಗಳಾದ ಸಂತೋಷ್ ಹಾಗೂ ಪ್ರಸನ್ನ ಅವರ ಸೇವೆಯನ್ನು ಶ್ಲಾಘಿಸಿ 20 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಘೋಷಿಸಿದ್ದಾರೆ.







