ಪುತ್ರ ಅನಾರೋಗ್ಯ: ಸಿಎಂ ಬೆಲ್ಜಿಯಂಗೆ

ಬೆಂಗಳೂರು, ಜು.27: ಬೆಲ್ಜಿಯಂ ಪ್ರವಾಸದ ವೇಳೆ ಪ್ಯಾನ್‌ಕ್ರಿಯಾಸ್ ಸಮಸ್ಯೆಯಿಂದಾಗಿ ಅಸ್ವಸ್ಥರಾಗಿರುವ ತನ್ನ ಹಿರಿಯ ಪುತ್ರ ರಾಕೇಶ್‌ರನ್ನು ಕಾಣಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಲ್ಜಿಯಂಗೆ ತೆರಳಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಕೂಡಾ ಅವರೊಂದಿಗೆ ಪ್ರಯಾಣಿಸಲಿದ್ದಾರೆ.ಮುಂಜಾನೆ 4:00 ಗಂಟೆಗೆ ಅವರು ಬೆಂಗಳೂರು ವಿಮಾನನಿಲ್ದಾಣದಿಂದ ನಿರ್ಗಮಿಸಲಿದ್ದಾರೆಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂ ಪ್ರವಾಸಕ್ಕೆ ಹೋಗಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸದ್ಯ ಅವರು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಕುಟುಂಬ ವರ್ಗವು ಅಲ್ಲಿನ ಆಸ್ಪತ್ರೆಯ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟನೆೆ ತಿಳಿಸಿದೆ.
ರಾಕೇಶ್‌ರಿಗೆ ಸಿಂಗಾಪುರ ಅಥವಾ ಅಮೆರಿಕದಲ್ಲಿ ಚಿಕಿತ್ಸೆ ಕೊಡಿಸಲು ಚಿಂತನೆ ನಡೆಸಿರುವ ಸಿದ್ದರಾಮಯ್ಯ, ಈ ಸಂಬಂಧ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಕೇಶ್ ಅನಾರೋಗ್ಯಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ನೀಡಲು ಮುಖ್ಯಮಂತ್ರಿಯ ಆಪ್ತ ವಲಯ ನಿರಾಕರಿಸಿದೆ.
ಸ್ನೇಹಿತರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿರುವ ರಾಕೇಶ್, ಬೆಲ್ಜಿಯಂನಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಕುರಿತು ಮಂಗಳವಾರ ರಾತ್ರಿ ಮುಖ್ಯಮಂತ್ರಿಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಸಿದ್ದರಾಮಯ್ಯ, ಬೆಲ್ಜಿಯಂನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೂಲಕ ತಮ್ಮ ಮಗನಿಗೆ ಅಗತ್ಯ ನೆರವು ಕಲ್ಪಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.





