ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಯಾದೀತೇ?
ಮಾನ್ಯರೆ,
ಮೊನ್ನೆ ಬೆಂಗಳೂರಿನಲ್ಲಿ ನಿಡುಮಾಮಿಡಿ ಸ್ವಾಮೀಜಿಗಳು ಮತ್ತು ಚಂಪಾ ಮುಂತಾದ ಪ್ರಗತಿಪರರು ಸಭೆ ಸೇರಿ ಕರ್ನಾಟಕ ಸರಕಾರ ಕಣ್ಣು ಮುಚ್ಚಾಳೆ ಆಡುವುದನ್ನು ನಿಲ್ಲಿಸಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕೆಂದು ಒತ್ತಡ ಹೇರಲು ಗುರುವಾರದಂದು ಮುಖ್ಯಮಂತ್ರಿಗಳನ್ನು ಮತ್ತೆ ಭೇಟಿಯಾಗುವುದಾಗಿ ಹೇಳಿದ್ದಾರೆ. ಆದರೆ ಇದರಿಂದ ಏನಾದರೂ ಸಕಾರಾತ್ಮಕ ಫಲಿತಾಂಶ ಬರುವುದು ಅನುಮಾನ. ಯಾಕೆಂದರೆ ಬಿಜೆಪಿಯವರು ಮಾತ್ರವಲ್ಲ ಕಾಂಗ್ರೆಸ್‌ನಲ್ಲಿಯೂ ಹೆಚ್ಚಿನವರು ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಒಳಗಿಂದೊಳಗೆ ವಿರೋಧಿಸುತ್ತಿದ್ದಾರೆ. ಕಾರಣ ಇವರಲ್ಲಿ ಹೆಚ್ಚಿನವರು ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಆಳವಾದ ನಂಬಿಕೆಯುಳ್ಳವರು. ಅದಕ್ಕಾಗಿ ಅವರು ತಮ್ಮ ಸರಕಾರಿ ನಿವಾಸಗಳಲ್ಲೂ ಕೋಟ್ಯಂತರ ರೂಪಾಯಿ ಸರಕಾರಿ ವೆಚ್ಚದಲ್ಲಿ ವಾಸ್ತು ಬದಲಾಯಿಸಿ ಜನರ ತೆರಿಗೆ ಹಣ ಹಾಳು ಮಾಡುತ್ತಾರೆ. ಜೆಡಿಎಸ್‌ನವರನ್ನಂತೂ ಕೇಳುವುದೇ ಬೇಡ.
ಇನ್ನು ಬಿಜೆಪಿಯವರಂತೂ ತಮ್ಮ ಮೂಢ ನಂಬಿಕೆಗಳನ್ನು ಬಹಿರಂಗವಾಗಿಯೇ ಪ್ರದರ್ಶಿಸುತ್ತಾರೆ. ಕಳೆದ ತಿಂಗಳು ಗುಜರಾತ್‌ನಲ್ಲಿ ಬಿಜೆಪಿಯವರು ನಡೆಸಿದ ವೈಪರೀತ್ಯ ನೋಡಿ- ಸತ್ತ ದನದ ಚರ್ಮ ಊರಿನೊಳಗೆ ಸುಲಿಯುವುದು ಊರಿಗೆ ಅಶಾಂತಿ ತರುತ್ತದೆ ಎಂದು ಒಬ್ಬ ಜ್ಯೋತಿಷಿ ಹೇಳಿದ್ದಕ್ಕೆ ಕೆಲವು ಕೇಸರಿ ಪುಂಡರು ಸತ್ತ ದನದ ಚರ್ಮ ಸುಲಿಯುತ್ತಿದ್ದ ಅಮಾಯಕ ದಲಿತರನ್ನು ಅಮಾನುಷವಾಗಿ ಹೊಡೆದು ತಮ್ಮ ಊರಿಗೆ ಮಾತ್ರವಲ್ಲ ತಾವೇ ಇಡೀ ದೇಶಕ್ಕೇ ಅಶಾಂತಿ ಉಂಟು ಮಾಡಿದರು. ಅಷ್ಟೇ ಅಲ್ಲ ಇಷ್ಟು ಕಾಲ ಜ್ಯೋತಿಷಿಗಳನ್ನು ಗಾಢವಾಗಿ ನಂಬುತ್ತಿದ್ದ ಗುಜರಾತ್‌ನ ಬಿಜೆಪಿಯವರು ಕೆಲದಿನಗಳ ಹಿಂದೆ ರಾಜಕೋಟ್ ಎಂಬಲ್ಲಿ ಒಬ್ಬ ಜ್ಯೋತಿಷಿ ಮೋದಿಯವರ ಬಗ್ಗೆ ಭವಿಷ್ಯ ನುಡಿದದ್ದಕ್ಕಾಗಿ ಅವನಿಗೆ ಥಳಿಸಿದರು.
ಒಂದು ವೇಳೆ ಆ ಜ್ಯೋತಿಷಿ ಮೋದಿಯವರನ್ನು ದೇವರೇ ಕಳುಹಿಸಿದ ಪವಾಡ ಪುರುಷ ಎಂದು ಸುಳ್ಳು ಹೇಳಿದ್ದರೆ ಬಹುಶಃ ಅವನಿಗೆ ದೊಡ್ಡ ಮೊತ್ತದ ಕವರ್ ಸಿಗುತ್ತಿತ್ತು. ಹಾಗಾದರೆ ಜ್ಯೋತಿಷಿಗಳು ಕೇವಲ ನಮ್ಮ ಪರವಾಗಿ ಜ್ಯೋತಿಷ್ಯ ಹೇಳಿದರೆ ಮಾತ್ರ ಅವರನ್ನು ಅಸಲಿ ಎಂದು ನಂಬಬೇಕು ಹಾಗೂ ಒಂದು ವೇಳೆ ಅವರು ನಮ್ಮ ವಿರುದ್ಧ ಹೇಳಿದರೆ ಅದು ಮೂಢನಂಬಿಕೆ ಎಂದು ಹೇಳಿ ಜ್ಯೋತಿಷಿಗಳಿಗೆ ಹೊಡೆದು ಹಲ್ಲು ಮುರಿಯಬೇಕು ಅಲ್ಲವೇ? ಈ ಎಲ್ಲಾ ಗೊಂದಲಕ್ಕಿಂತ ಜ್ಯೋತಿಷ್ಯವನ್ನು ಒಟ್ಟಾರೆ ನಿಷೇಧಿಸಿದರೆ ಒಳ್ಳೆಯದಲ್ಲವೇ?





