ಇಲಾಖೆಗಳನ್ನು ಹದ್ದುಬಸ್ತಿನಲ್ಲಿಡಬೇಕಾಗಿದೆ
ಮಾನ್ಯರೆ,
ರಾಜ್ಯದಲ್ಲಿ ಸರಕಾರದ ಭಾಗವಾಗಿರುವ ಜನಪ್ರತಿನಿಧಿಗಳು ಅಧಿಕಾರಿಗಳು ಸಮಸ್ಯೆ ಬಿಗಡಾಯಿಸುವುದಕ್ಕಿಂತ ಮೊದಲು ಬಗೆಹರಿಸುವ ಕ್ರಮಕ್ಕೆ ಮುಂದಾಗದ ಅನೇಕ ಪ್ರಕರಣಗಳು ಕಣ್ಣ ಮುಂದಿವೆೆ. ಸಾರಿಗೆ ಮುಷ್ಕರದ ಬಗ್ಗೆ ಕಳೆದ ಎಂಟು ತಿಂಗಳಿನಿಂದ ಸರಕಾರಕ್ಕೆ ಗೊತ್ತಿದ್ದರೂ ಕಿವುಡರಂತೆ ವರ್ತಿಸಿದ್ದರಿಂದ ಕಳೆದ ಮೂರು ದಿನಗಳಲ್ಲಿ ಸರಕಾರಿ ಬಸ್ಸುಗಳನ್ನೆ ಅವಲಂಬಿಸುತ್ತಿದ್ದ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಸರಕಾರ ಇರುವುದು ಜನಸಾಮಾನ್ಯರಿಗೆ ಉತ್ತಮ ಆಡಳಿತ ಕೊಡುವುದಕ್ಕಾಗಿ. ಆಡಳಿತ ನಡೆಸುವಾಗ ಏಳು ಬೀಳುಗಳು ಸಹಜ. ಆದರೆ ಹಠಮಾರಿ ಧೋರಣೆ ಮಾಡಿದರೆ ಮುಂದೆ ಪರಿಣಾಮ ಅನುಭವಿಸುವುದು ಶತಸಿದ್ಧ. ಸಾರಿಗೆ ಮುಷ್ಕರ ಮಾಡಿದ್ದರಿಂದ ಸರಕಾರಕ್ಕೆ ಆದ ಕೋಟಿ ಕೋಟಿ ರೂ. ನಷ್ಟವನ್ನು ಇನ್ಯಾವುದರಿಂದಲೋ ಭರಿಸಬಹುದು. ಆದರೆ ಜನರು ಕಳೆದುಕೊಂಡದ್ದನ್ನು ಮತ್ತೆ ಪಡೆದುಕೊಳ್ಳಲಾಗುತ್ತದೆಯೇ? ಹೆಚ್ಚು ಶುಲ್ಕ ಪಡೆಯುವ ಖಾಸಗಿ ವಾಹನಗಳ ಮೇಲೆ ಪೊಲೀಸರು ನಿಗಾವಹಿಸಲಿದ್ದಾರೆ ಎಂದಿದ್ದ ಸರಕಾರ ಈ ಬಗ್ಗೆ ಏನಾದರೂ ಕ್ರಮ ಕೈಗೊಂಡಿದೆಯೇ? ಸರಕಾರದ ಎಲ್ಲಾ ಇಲಾಖೆಗಳನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಮುಂದಿನ ದಿನಗಳಲ್ಲಿ ಸರಕಾರದ ವಿವಿಧ ಇಲಾಖೆಗಳಿಂದ ಆಡಳಿತದಲ್ಲಿರುವವರಿಗೇ ಸಂಚಕಾರ ಬಂದೀತು ಎಂಬುದನ್ನು ಸಂಬಂಧಿತರು ಆದಷ್ಟು ಬೇಗ ಅರಿತರೆ ಉತ್ತಮ. ಆಗ ಮಾತ್ರ ಜನತೆ ಸುಸ್ಥಿರ ಸರಕಾರವನ್ನು ನೋಡಲು ಸಾಧ್ಯ.





