ಗಾಂಧೀಜಿಯನ್ನು ಕೊಲ್ಲುವುದಾಗಿ ಬೆದರಿಸಿದ್ದ ಗೋಳ್ವಾಲ್ಕರ್
ಸಿಐಡಿ ವರದಿ
ಹೊಸದಿಲ್ಲಿ, ಜು.27: ಮಾಜಿ ಆರೆಸ್ಸೆಸ್ ಮುಖ್ಯಸ್ಥ ಗೋಳ್ವಾಲ್ಕರ್ ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಕೊಲ್ಲುವುದಾಗಿ ಬೆದರಿಸಿದ್ದರೇ ? ಈ ಪ್ರಶ್ನೆಗೆ ಹೌದೆನ್ನುವ ಉತ್ತರವನ್ನು ದಿಲ್ಲಿ ಪೊಲೀಸರ 1947ರ ಸಿಐಡಿ ವರದಿಯೊಂದು ಹೇಳುತ್ತದೆ ಎಂಬುದಾಗಿ ಕ್ಯಾಚ್ ನ್ಯೂಸ್ ವರದಿ ತಿಳಿಸಿದೆ.ಈ ಸಿಐಡಿ ವರದಿಯ ಪ್ರಕಾರ ಡಿಸೆಂಬರ್ 8, 1947ರ ಆರೆಸ್ಸೆಸ್ ಸಭೆಯೊಂದರಲ್ಲಿ ಭಾಗವಹಿಸಿದ್ದ ಗೋಳ್ವಾಲ್ಕರ್ ತಮ್ಮ ಸಂಘಟನೆಯ ಬಳಿ ಗಾಂಧೀಜಿಯವರನ್ನು ಮೌನವಾಗಿಸುವ ಸಾಧನವಿದೆಯೆಂದಿದ್ದರು. ತರುವಾಯ ಲಕ್ನೋ ಸಿಐಡಿಯ ಪತ್ರವೊಂದರಲ್ಲಿ ಅದೇ ವರ್ಷದ ಡಿಸೆಂಬರ್ 1ರಂದು ಮಥುರಾದಲ್ಲಿ ಸಭೆ ಸೇರಿದ್ದ ಆರೆಸ್ಸೆಸ್ ಕಾರ್ಯಕರ್ತರು ಕೆಲ ಕಾಂಗ್ರೆಸ್ ನಾಯಕರ ಹತ್ಯೆ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದರೆಂದು ಹೇಳಲಾಗಿದೆ.
ಮಹಾತ್ಮ ಗಾಂಧಿಯವರ ಹತ್ಯೆ ನಡೆದ ನಂತರ ದಿಲ್ಲಿಯ ಸಿಐಡಿ ಪೊಲೀಸರು ನಡೆಸಿದ ತನಿಖೆಯ ಭಾಗವಾದ ಈ ಕೆಲವೊಂದು ದಾಖಲೆಗಳು ದಿಲ್ಲಿ ಪೊಲೀಸರ ಸಂಗ್ರಹದಲ್ಲಿವೆಯೆಂದು ಕ್ಯಾಚ್ ನ್ಯೂಸ್ ವರದಿ ತಿಳಿಸಿದೆ. ಸಿಐಡಿಗೆ ಈ ಬಗ್ಗೆ ಮಾಹಿತಿ ನೀಡಿದ ಮೂಲವೊಂದನ್ನು ವರದಿಯಲ್ಲಿ ‘ಸೇವಕ್’ ಎಂದು ಉಲ್ಲೇಖಿಸಲಾಗಿದೆ. ಆರೆಸ್ಸೆಸ್ ಕಾರ್ಯಕರ್ತರನ್ನು ಸೇವಕ್ ಎಂದು ಹೇಳಲಾಗುತ್ತದೆಯೆಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
ಸೇವಕ್ ರಿಪೋರ್ಟ್ಸ್ ಎಂಬ ವರದಿಯ ಸಾರಾಂಶ ಹೀಗಿದೆ ‘‘8-12-47ರಂದು ಸುಮಾರು 2,500 ಸಂಘ ಕಾರ್ಯಕರ್ತರು ರೋಹ್ಟಕ್ ರಸ್ತೆ ಸಮೀಪದ ತಮ್ಮ ಶಿಬಿರದಲ್ಲಿ ಸೇರಿದ್ದರು. ಸ್ವಲ್ಪ ಡ್ರಿಲ್ ನಡೆದ ನಂತರ ಸಂಘದ ಗುರು ಎಂ. ಎಸ್. ಗೋಳ್ವಾಲ್ಕರ್‌ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು. ಮುಸ್ಲಿಮರ ವಿಚಾರ ಮಾತನಾಡಿದ ಅವರು ಯಾವುದೇ ಶಕ್ತಿ ಮುಸ್ಲಿಮರನ್ನು ಹಿಂದೂಸ್ಥಾನದಲ್ಲಿರಲು ಬಿಡುವುದಿಲ್ಲ. ಅವರು ದೇಶ ಬಿಡಬೇಕಾಗುತ್ತದೆ ಎಂದು ಹೇಳಿದ್ದರು.ಮುಸ್ಲಿಮರನ್ನು ಭಾರತದಲ್ಲಿಯೇ ಇಟ್ಟರೆ ಕಾಂಗ್ರೆಸ್ ಪಕ್ಷ ಚುನಾವಣೆ ಸಮಯ ಅವರಿಂದ ಮತಗಳನ್ನು ಪಡೆಯಬಹುದೆಂಬ ಉದ್ದೇಶದಿಂದ ಮಹಾತ್ಮ ಗಾಂಧಿ ಮುಸ್ಲಿಮರನ್ನು ಭಾರತದಲ್ಲಿಯೇ ಉಳಿಸಲು ಬಯಸಿದ್ದಾರೆಂದು ಅವರು ಹೇಳಿದ್ದರು. ಮಹಾತ್ಮ ಗಾಂಧಿ ಇನ್ನು ಮುಂದೆ ಯಾರನ್ನೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅವರಂಥವರನ್ನು ಮುಗಿಸುವ ಸಾಧನ ನಮ್ಮ ಬಳಿಯಿದೆ. ಆದರೆ ಹಿಂದೂಗಳೊಂದಿಗೆ ವೈರತ್ವ ಹೊಂದುವುದು ನಮ್ಮ ಸಂಪ್ರದಾಯವಲ್ಲ. ಆದರೆ ನಮಗೆ ಅನ್ಯ ದಾರಿಯಿಲ್ಲದಿದ್ದಲ್ಲಿ ನಾವು ಅದನ್ನು ಮಾಡಬೇಕಾಗುತ್ತದೆ ಎಂದಿದ್ದರು’’.







