ಹುಬ್ಬಳ್ಳಿ: ಬಸ್‌ನಲ್ಲಿ ಬೆಂಕಿ; ಕುಂದಾಪುರದ ವ್ಯಕ್ತಿ ಸಜೀವ ದಹನ

ಕುಂದಾಪುರ, ಜು.27: ಹುಬ್ಬಳ್ಳಿಯ ವರೂರು ಸಮೀಪ ಬುಧವಾರ ಬೆಳಗ್ಗಿನ ಜಾವ ಖಾಸಗಿ ಬಸ್ಸಿನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಸಜೀವ ದಹನಗೊಂಡ ಮೂವರಲ್ಲಿ ಒಬ್ಬರನ್ನು ಕುಂದಾಪುರ ತಾಲೂಕಿನ ಬಸ್ರೂರು ಸಮೀಪದ ಮೇರ್ಡಿಯ ಸುರೇಶ್ ಹೆಗ್ಡೆ(47) ಎಂದು ಗುರುತಿಸಲಾಗಿದೆ.
ಕಳೆದ ಒಂದು ವರ್ಷಗಳಿಂದ ಬೆಂಗಳೂರಿನ ಔಷಧಿ ವಿತರಣಾ ಕಂಪೆನಿಯಲ್ಲಿ ವಿತರಕರಾಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ್ ಹೆಗ್ಡೆ, ಕಂಪೆನಿಯ ಮಾರ್ಕೆಟಿಂಗ್ ಕೆಲಸಕ್ಕಾಗಿ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುವಾಗ ಈ ದುರಂತ ಸಂಭವಿಸಿದೆ. ಇವರ ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಗುರುತು ಹಿಡಿಯಲಾರದಷ್ಟು ಸುಟ್ಟು ಹೋಗಿದೆ. ಮೃತದೇಹದ ಡಿಎನ್‌ಎ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಇವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಎಂಬಲ್ಲಿ ತನ್ನ ಸಹೋ ದರನ ಜೊತೆ ಪಾಲುದಾರಿಕೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ಇವರು ತನ್ನ ಪತ್ನಿ ಕೃಷ್ಣಲೀಲಾ ಹೆಗ್ಡೆ ಹಾಗೂ ದ್ವಿತೀಯ ಪಿಯುಸಿ ಕಲಿಯುತ್ತಿರುವ ಮಗ ಗಣೇಶ್‌ನೊಂದಿಗೆ ಶಿವಮೊಗ್ಗದಲ್ಲಿ ವಾಸವಾಗಿದ್ದರು. ಮೃತದೇಹದ ಡಿಎನ್‌ಎ ಪರೀಕ್ಷೆ ನಡೆಸಿದ ಬಳಿಕ, ಮೇರ್ಡಿಗೆ ತಂದು ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.





