ಹೈಪವರ್ ಕಮಿಶನ್ ವರದಿಗೆ ಆಪ್ ಒತ್ತಾಯ
ಮಹಾದಾಯಿ ನೀರು ಹಂಚಿಕೆ ಪ್ರಕರಣ
ಮಂಗಳೂರು,ಜು.28: ಮಹಾಯಾತಿ ನೀರು ಹಂಚಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ತಕ್ಷಣ ಉನ್ನತ ಮಟ್ಟದ ಸಮಿತಿ ರಚಿಸಿ ವರದಿಯನ್ನು ತಯಾರಿಸಿ ತಕ್ಷಣ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ವಕ್ತಾರೆ ಶಾಂತಲಾ ದಾಮ್ಲೆ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರದ ತಿಕ್ಕಾಟ, ರಾಜಕಾರಣದಿಂದ ಉತ್ತರ ಕರ್ನಾಟಕದ ಜನರು ಸಂಕಷ್ಟ ಪಡುವಂತಾಗಿದೆ ಎಂದು ಆರೋಪಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಭೂವಿಜ್ಞಾನಿ, ಗೇಜ್, ಹವಾಮಾನ, ಪರಿಸರ, ದೂರು ಸಂವೇದಿ, ವನ್ಯಜೀವಿ, ತಾಂತ್ರಿಕ ಮೊದಲಾದ ಕ್ಷೇತ್ರಗಳ ತಜ್ಞರು, ರೈತ ಹೋರಾಟಗಾರರು, ಕೃಷಿ ತಜ್ಞರು, ಇಂಜನಿಯರಿಂಗ್ ತಜ್ಞರನ್ನು ಒಳಗೊಂಡ ಹೈಪವರ್ ಕಮಿಶನ್ ರಚಿಸಿ, ವರದಿ ಪಡೆದು ಅದರ ಆಧಾರದ ಮೇಲೆ ನ್ಯಾಯಾಧಿಕರಣದಲ್ಲಿ ವಾದ ಮಂಡಿಸಬೇಕು ಎಂದರು.
ಕೇಂದ್ರ ಸರಕಾರವು ಗೋವಾದಲ್ಲಿ ಮುಂಬರುವ ಚುನಾವಣೆಯ ದೃಷ್ಟಿಯಿಂದ ಗೋವಾದ ಪರವಾಗಿ ವಾದ ಮಂಡಿಸಲು ತನ್ನದೇ ಸರಕಾರದ ಸಾಲಿಸಿಟಾರ್ ಜನರಲ್ ಆತ್ಮಾರಾಮ್ ನಾಡಕರ್ಣಿಯವರನ್ನು ವಕೀಲರಾಗಿ ನೇಮಿಸುವ ಮೂಲಕ ಕರ್ನಾಟಕ ವಿರೋಧಿ ನಿಲುವನ್ನು ಪ್ರದರ್ಶಿಸಿದೆ. ಇದೇ ವೇಳೆ ಕರ್ನಾಟಕ ಸರಕಾರ ಗಂಭೀರವನ್ನು ಅರಿಯಲು ಯತ್ನಿಸದೆ ನ್ಯಾಯವಾದಿಗಳಿಂದ ಬರಿಗೈಯಲ್ಲಿ ವಾದ ಮಂಡಿಸಿದೆ. ನ್ಯಾಯಾಧಿಕರಣದ ಎದುರು, ಕರ್ನಾಟಕದ ಜನತೆಗೆ ಮಹಾದಾಯಿ ನೀರಿನ ಅಗತ್ಯತೆಯನ್ನು ಮನವರಿಕೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಆಪ್ ಕಾರ್ಯಕರ್ತ ರೋಹನ್ ಸಿರಿ, ಬೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







