ಉನಾ ದಲಿತ ಹಲ್ಲೆ ಘಟನೆ ಖಂಡಿಸಿ ದಲಿತ ಲೇಖಕ ಮಕ್ವಾನಾರಿಂದ ಪ್ರಶಸ್ತಿ ವಾಪಸ್
ಅಹ್ಮದಾಬಾದ್, ಜು.28: ಉನಾದಲ್ಲಿ ದಲಿತರನ್ನು ಥಳಿಸಿದುದನ್ನು ಪ್ರತಿಭಟಿಸಿ, ದಲಿತ ಲೇಖಕ ಅಮೃತ್‌ಲಾಲ್ ಮಕ್ವಾನಾ, ಗುಜರಾತ್ ಸರಕಾರ ಪ್ರದಾನಿಸಿದ್ದ ಪ್ರಶಸ್ತಿಯೊಂದನ್ನು ಬುಧವಾರ ಹಿಂದಿರುಗಿಸಿದ್ದಾರೆ.
44ರ ಹರೆಯದ ಅವರು, ತನ್ನ ‘ಖರಾಪಟ್ ನು ದಲಿತ್ ಲೋಕ್ ಸಾಹಿತ್ಯ’ಕ್ಕಾಗಿ 2013-14ನೆ ಸಾಲಿನ ದಾಸಿ ಜೀವನಶ್ರೇಷ್ಠ ದಲಿತ ಸಾಹಿತ್ಯ ಕೃತಿ ಪ್ರಶಸ್ತಿ ಪಡೆದಿದ್ದರು.
ರೂ.25 ಸಾವಿರ ನಗದು ಸಹಿತ ಪ್ರಶಸ್ತಿಯನ್ನು ಮಕ್ವಾನಾ, ಅಹ್ಮದಾಬಾದ್ ಜಿಲ್ಲಾ ಕಲೆಕ್ಟರ್ ಕಚೇರಿಗೆ ಮರಳಿಸಿದ್ದಾರೆ.
ಉನಾದಲ್ಲಿ ದಲಿತ ಯುವಕರನ್ನು ನಡೆಸಿಕೊಂಡ ರೀತಿಯ ಬಗ್ಗೆ ದುಃಖ ಹಾಗೂ ನೋವಿನಿಂದಾಗಿ ತಾನೀ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆಂದು ಸಂಕ್ಷಿಪ್ತ ಪತ್ರವೊಂದನ್ನು ತಾನು ಅಧಿಕಾರಿಗಳಿಗೆ ಬರೆದಿದ್ದೇನೆಂದು ಅವರು ತಿಳಿಸಿದ್ದಾರೆ.
ಪತ್ರವನ್ನು ಗುಜರಾತ್‌ನ ಮುಖ್ಯಮಂತ್ರಿ ಆನಂದಿಬೆನ್ ಪಟೇಲರ ಹೆಸರಿಗೆ ಬರೆಯಲಾಗಿದೆ.
ಗುಜರಾತ್‌ನಲ್ಲಿ ಇಂತಹ ಘಟನೆಗಳು ಮಾಮೂಲಾಗಿ ನಡೆಯುತ್ತಿವೆ. ಆದರೆ, ದಲಿತರಿಗೆ ನ್ಯಾಯ ಒದಗಿಸಲು ಸರಕಾರ ಏನೂ ಮಾಡುತ್ತಿಲ್ಲ. ಗೀರ್ ಸೋಮನಾಥ್ ಜಿಲ್ಲೆಯ ಸಮಾಧಿಯಾಲ ಗ್ರಾಮದಲ್ಲಿ ನಡೆದ ಘಟನೆ ಆಘಾತಕರ ಹಾಗೂ ಬರ್ಬರವಾದುದಾಗಿದೆ. ದಲಿತರ ಮೇಲಿನ ಇಂತಹ ಹಲ್ಲೆಗಳು ಖಂಡನಾರ್ಹ. ಅದು ತನ್ನನ್ನು ಸಂಪೂರ್ಣ ನಡುಗಿಸಿದೆ. ಅಂತಹ ಘಟನೆಗಳು ತಮ್ಮ ಸುತ್ತ ಸದಾ ನಡೆಯುತ್ತಿರುವುದು ದುಃಖದ ಸಂಗತಿಯೆಂದು ಮಕ್ವಾನಾ ಹೇಳಿದ್ದಾರೆ.