15 ರೂ. ಸಾಲ ಬಾಕಿಗಾಗಿ ದಲಿತ ದಂಪತಿಯ ಕಡಿದು ಕೊಲೆ
ಉತ್ತರಪ್ರದೇಶದಲ್ಲಿ ನಡೆದ ಬರ್ಬರ ಕೃತ್ಯ

ಲಕ್ನೋ,ಜು.28: ಕೇವಲ 15 ರೂ. ಸಾಲವನ್ನು ಮರುಪಾವತಿಸದಿದ್ದುದಕ್ಕಾಗಿ ದಲಿತ ದಂಪತಿಯನ್ನು ಅಂಗಡಿ ಮಾಲಕನೊಬ್ಬ ಬರ್ಬರವಾಗಿ ಕಡಿದು ಕೊಲೆಗೈದ ಘಟನೆ ಉತ್ತರಪ್ರದೇಶದ ಮೈನ್‌ಪುರ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಈ ಹೇಯ ಕೃತ್ಯವನ್ನು ಎಸಗಿದ ಅಂಗಡಿ ಮಾಲಕನನ್ನು ಅಶೋಕ್ ಮಿಶ್ರಾ ಎಂದು ಗುರುತಿಸಲಾಗಿದೆ.
ದಲಿತ ದಂಪತಿಯು ಆತನಿಗೆ 15 ರೂ. ಸಾಲವನ್ನು ಬಾಕಿಯಿರಿಸಿದ್ದರು. ಅದನ್ನು ಪಾವತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಈ ದಂಪತಿ ಮನೆಗೆ ಸಾಮಾಗ್ರಿಗಳನ್ನು ಖರೀದಿಸಲೆಂದು ಅಶೋಕ್ ಮಿಶ್ರಾನ ಅಂಗಡಿಗೆ ತೆರಳಿದಾಗ, ಆತ 15 ರೂ. ಪಾವತಿಸುವಂತೆ ಅವರಿಗೆ ತಿಳಿಸಿದ ಮತ್ತು ಅವರೊಂದಿಗೆ ವಾಗ್ದಾದಕ್ಕಿಳಿದಿದ್ದನು. ಈ ಸಂದರ್ಭದಲ್ಲಿ ರೋಷತಪ್ತನಾದ ಮಿಶ್ರಾ, ಅಲ್ಲಿಯೇ ಇದ್ದ ಕೊಡಲಿಯಿಂದ ದಲಿತ ದಂಪತಿಯನ್ನು ಹಲವು ಬಾರಿ ಕಡಿದನೆನ್ನಲಾಗಿದೆ. ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ದಲಿತ ದಂಪತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರಿಬ್ಬರೂ ಕೊನೆಯುಸಿರೆಳೆದಿದ್ದರು. ಮೈನ್‌ಪುರಿ ಕ್ಷೇತ್ರವು ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರ ಕ್ಷೇತ್ರವಾಗಿದೆ. ಪೊಲೀಸರು ಅಂಗಡಿ ಮಾಲಕ ಮಿಶ್ರಾನನ್ನು ಬಂಧಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.





