ಪಡುಪಣಂಬೂರು: ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪೋಷಕರಿಂದ ತರಗತಿಗೆ ಬೀಗ
.jpg)
ಮುಲ್ಕಿ, ಜು.28: ಇಲ್ಲಿನ ಪಡುಪಣಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ವರ್ಗಾಯಿಸುತ್ತಿರುವ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ತರಗತಿ ಬಹಿಷ್ಕರಿಸಿ ತರಗತಿ ಕೋಣೆಗಳಿಗೆ ಬೀಗ ಜಡಿದು ಗುರುವಾರ ಧರಣಿ ನಡೆಸಿದರು.
ಶತಮಾನ ಕಂಡಿರುವ ಪಡುಪಣಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 6 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಒಬ್ಬರು ದೈಹಿಕ ಶಿಕ್ಷಣ ಶಿಕ್ಷರು. ಶಾಲೆಯಲ್ಲಿ 1 ರಿಂದ 7 ತರಗತಿಯ ವರೆಗೆ ಸುಮಾರು 64 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತು ಪಡಿಸಿ ಉಳಿದ 5 ಮಂದಿ ಶಿಕ್ಷಕರಲ್ಲಿ ಓರ್ವ ಶಿಕ್ಷಕಿಯನ್ನು ವರ್ಗಾಯಿಸುವ ಬಗ್ಗೆ ಸರಕಾರದ ಸುತ್ತೋಲೆ ಬಂದಿದ್ದು, ಕೌನ್ಸೆಲಿಂಗ್ ಕೂಡಾ ನಡೆದಿದೆ.
ಈ ಬಗ್ಗೆ ತಿಳಿದುಕೊಂಡ ಪೋಷಕರು ಬೆಳಗ್ಗೆ ಶಾಲೆಯ ಆವರಣದಲ್ಲಿ ಜಮಾಯಿಸಿ ಯಾವುದೇ ಕಾರಣಕ್ಕೂ ಶಾಲೆಯ ಯಾವೊಬ್ಬ ಶಿಕ್ಷಕರನ್ನೂ ವರ್ಗಾಯಿಸಲು ಬಿಡುವುದಿಲ್ಲ. ಪಠ್ಯಕ್ರಮಗಳು ನಡೆಯುತ್ತಿರುವಾಗ ಈ ಸಮಯ ವರ್ಗಾವಣೆಗೆ ಸೂಕ್ತ ಸಮಯವೂ ಅಲ್ಲ ಎಂದು ಘೋಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು. ಅಲ್ಲದೆ, ತರಗತಿ ಕೊಠಡಿಗಳ ಬೀಗ ತರೆಯಲು ತಡೆಯೊಡ್ಡಿ ಮೇಲಧಿಕಾರಿಗಳು ಸ್ಥಳಕ್ಕೆ ಬಂದು ವರ್ಗಾವಣೆ ಆದೇಶ ಹಿಂಪಡೆಯದೇ ತರಗತಿ ತೆರಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ಸಿಆರ್‌ಪಿ ರಾಮದಾಸ್, ಪೋಷಕರು, ಶಾಲಾಭಿವೃದ್ಧಿ ಸಮೀತಿ ಸದಸ್ಯರು ಹಾಗೂ ಮಕ್ಕಳ ಮನವೊಲಿಸಲು ಪ್ರಯತ್ನಿಸಿದರಾದರೂ, ಯಾವುದೇ ಮಾತುಗಳಿಗೂ ಬಗ್ಗದೆ, ಮೇಲಧಿಕಾರಿಗಳು ಸ್ಳಕ್ಕೆ ಬಂದು ಪೋಷಕರು ಮತ್ತು ಮಕ್ಕಳ ಅಹವಾಲು ಸ್ವೀಕರಿಸಿ, ವರ್ಗಾವಣೆ ಆದೇಶ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀಯವರನ್ನು ತರಾಟೆಗೆತ್ತಿಕೊಂಡ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಯಾವುದೇ ಕಾರಣಕ್ಕೂ ತುಳಸಿ ಟೀಚರ್ ಅಥವಾ ಶಾಲೆಯ ಬೇರೆ ಯಾವುದೇ ಅಧ್ಯಾಪಕರನ್ನು ಶಾಲೆಯಿಂದ ವರ್ಗಾವಣೆ ಮಾಡಲು ಬಿಡುವುದಿಲ್ಲ. ಒಂದು ವೇಳೆ ಮಾಡುವುದೇ ಆದಲ್ಲಿ, ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲಾರೆವು. ತಕ್ಷಣ ವರ್ಗಾವಣೆ ಪ್ರಮಾಣ ಪತ್ರ ನೀಡಬೇಕೆಂದು ಪಟ್ಟು ಹಿಡಿದರು.
ಸರಕಾರದ ಸುತ್ತೋಲೆಯಂತೆ 4 ಮಂದಿ ಶಿಕ್ಷಕರು 64 ಮಂದಿ ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಲು ಸಾಧ್ಯ ಎಂದು ಶಿಕ್ಷಣಾಧಿಕಾರಿಯನ್ನು ಪ್ರಶ್ನಿಸಿದ ಪ್ರತಿಭಟನಾಕಾರರು ಸರಕಾರದ ಈ ಕ್ರಮ ಸರಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ಅಡವಿಡುವ ಮುನ್ಸೂಚನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪೋಷಕರು ಮತ್ತು ಎಡಿಎಂಸಿ ಪದಾಧಿಕಾರಿಗಳು ಶಿಕ್ಷಕಿಯ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು. ಅಲ್ಲದೆ, ಯಾವುದೇ ಅಧ್ಯಾಪಕರನ್ನು ವರ್ಗಾಯಿಸಬಾರದು ಎಂದು ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಮೈಮುನಾ, ಜಿಲ್ಲಾ ಪಂಚಾಯತ್ ಸದಸ್ಯ ಪ್ರಮೋದ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಸೇರಿದಂತೆ ಪೋಷಕರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ತುಳಸಿ ಟೀಚರ್ ಅವರಿಗೆ ವರ್ಗಾವಣೆ ಆದೇಶ ಈ ವರೆಗೆ ಬಂದಿಲ್ಲ. ಕೇವಲ ಕೌನ್ಸೆಲಿಂಗ್ ಮಾತ್ರ ನಡೆಸಲಾಗಿದೆ. ಸರಕಾರದ ಆದೇಶದಂತೆ ನಡೆದಿದೆ. ಪೋಷಕರು ಮತ್ತು ವಿದ್ಯಾರ್ಥಿಗಳ ಮನವಿಯನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುವುದು ಎಂದರು.
ಸರಕಾರ ಕಡ್ಡಾಯ ಶಿಕ್ಷಣ ಕಾಯ್ದೆಯನ್ವಯ ಖಾಸಗಿ ಶಾಲೆಗಳ ಪ್ರತಿ ಮಗುವಿಗೆ ವಾರ್ಷಿಕ 11, 800 ರೂ. ನೀಡುತ್ತಿದೆ. ಅಂತೆಯೇ, ಅದೇ ಹಣವನ್ನು ಸರಕಾರಿ ಶಾಲೆಗಳಿಗೂ ನೀಡಲಿ. ಮುಖ್ಯೋಪಾಧ್ಯಾಯರ ಮೇಲುಸ್ತುವಾರಿಯಲ್ಲಿ ಶಾಲಾಭಿವೃದ್ಧಿ ಸಮಿತಿಗಳು ಎಲ್ಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡ ಬಹುದು. ಈ ಬಗ್ಗೆ ಸರಕಾರ ಶೀಘ್ರ ಚಿಂತನೆ ನಡೆಸಿ ಕ್ರಮಕೈಗೊಳ್ಳಲಿ.
ವಿನೋದ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಸದಸ್ಯ.
ತುಳಸಿ ಟೀಚರ್ ಅವರು ನಮ್ಮ ಅಚ್ಚು ಮೆಚ್ಚಿನ ಅಧ್ಯಾಪಕರು. ಅವರನ್ನು ವರ್ಗಾಯಿಸಬಾರು. ಅಲ್ಲದೆ, ಶಾಲೆಯಲ್ಲಿರುವ ಅಧ್ಯಾಪಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನ ನಡೆಸುತ್ತಾರೆ. ಯಾರನ್ನೂ ವರ್ಗಾಯಿಸಬಾರದು.
ವಿದ್ಯಾರ್ಥಿನಿ.
ತುಳಸಿ ಟೀಚರ್ ಸಹಿತ ಯಾವುದೇ ಅಧ್ಯಾಪಕರನ್ನು ವರ್ಗಾಯಿಸುವ ಪ್ರಕ್ರಿಯೆ ಕೈಬಿಡಬೇಕು. ನ್ಯಾಯ ದೊರೆಯುವ ವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು. ಇಲ್ಲದಿದ್ದಲ್ಲಿ ನಮ್ಮ ಮಕ್ಕಳ ವರ್ಗಾವಣಾ ಪ್ರಮಾಣ ಪತ್ರಗಳನ್ನು ಶೀಘ್ರವೇ ನೀಡಲಿ.
ಮಮತಾ, ಎಸ್‌ಡಿಎಂಸಿ ಅಧ್ಯಕ್ಷೆ.







