ಜ್ಞಾನಪೀಠ ಪುರಸ್ಕೃತ ಸಾಹಿತಿ ಮಹಾಶ್ವೇತಾದೇವಿ ಇನ್ನಿಲ್ಲ

ಕೋಲ್ಕತಾ,ಜು.28: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಬಂಗಾಳಿ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಮಹಾಶ್ವೇತಾದೇವಿ ಗುರುವಾರ ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 3:30ರ ವೇಳೆಗೆ ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ 90 ವರ್ಷ ವಯಸ್ಸಾಗಿತ್ತು.
ದುರ್ಬಲ ಹಾಗೂ ಶೋಷಿತ ವರ್ಗಗಳ ಶೋಚನೀಯ ಬದುಕಿನ ಬಗ್ಗೆ ಬೆಳಕು ಚೆಲ್ಲುವಂತಹ ಅಮೂಲ್ಯ ಸಾಹಿತ್ಯಕೃತಿಗಳನ್ನು ನೀಡಿರುವ ಮಹಾಶ್ವೇತದೇವಿಯವರ ನಿಧನದಿಂದಾಗಿ, ಭಾರತದ ಸಾಹಿತ್ಯಲೋಕವು ಅನರ್ಘ್ಯ ರತ್ನವೊಂದನ್ನು ಕಳೆದುಕೊಂಡಿದೆ.
ಅರ್ಧಶತಮಾನಕ್ಕೂ ದೀರ್ಘ ಸಮಯದವರೆಗೆ ಸಾಹಿತ್ಯಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವ ಶ್ವೇತಾದೇವಿ ಜ್ಞಾನಪೀಠ ಪ್ರಶಸ್ತಿಯ ಜೊತೆಗೆ ಸಾಹಿತ್ಯ ಅಕಾಡೆಮಿ ಹಾಗೂ ಪ.ಬಂಗಾಳದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಬಂಗವಿಭೂಷಣ’ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿರುವ ಶ್ವೇತಾದೇವಿಗೆ, 2006ರಲ್ಲಿ ಭಾರತದ ಎರಡನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು
ಮಹಾಶ್ವೇತಾದೇವಿಯವರ 1926ರಲ್ಲಿ ಢಾಕಾದಲ್ಲಿ ಜನಿಸಿದರು. ಅವರ ತಂದೆ ಮನೀಶ್ ಘಾಟಕ್ ಖ್ಯಾತ ಕವಿ ಹಾಗೂ ಕಾದಂಬರಿಕಾರರಾಗಿದ್ದರು. ತಾಯಿ ಧರಿತ್ರಿದೇವಿ ಕೂಡಾ ಬರಹಗಾರ್ತಿಯಾಗಿದ್ದರು.
ಕಾದಂಬರಿ, ಆತ್ಮಕಥೆ ಸೇರಿದಂತೆ 20ಕ್ಕೂ ಅಧಿಕ ಸಾಹಿತ್ಯಕೃತಿಗಳನ್ನು ಮಹಾಶ್ವೇತಾದೇವಿ ಬರೆದಿದ್ದಾರೆ. ಝಾನ್ಸಿರಾಣಿ ಲಕ್ಮೀಬಾಯಿ ಕಾದಂಬರಿ ಅವರ ಚೊಚ್ಚಲ ಕೃತಿಯಾಗಿದೆ. ಹಝಾರ್ ಚೌರಾಸಿ ಕಿ ಮಾ ಕಾದಂಬರಿಯು ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. 70ರ ದಶಕದಲ್ಲಿ ನಕ್ಸಲೀಯನೊಬ್ಬನ ತಾಯಿಯ ಬದುಕನ್ನು ಆಧರಿಸಿದ ಈ ಕಾದಂಬರಿಯು ಬಾಲಿವುಡ್‌ನಲ್ಲಿ ರುಡಾಲಿ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿತ್ತು.
ಮಧ್ಯಪ್ರದೇಶ,ಪ.ಬಂಗಾಳ, ಬಿಹಾರ ಹಾಗೂ ಚತ್ತೀಸ್‌ಗಢಗಳಲ್ಲಿ ಆದಿವಾಸಿಗಳ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿಯೂ ಮಹಾಶ್ವೇತಾದೇವಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.





