ಬೆಳ್ತಂಗಡಿ: ಹಾಸ್ಟೆಲ್ ಮಕ್ಕಳೊಂದಿಗೆ ಭೋಜನ ಸವಿದ ಜಿ.ಪಂ. ಸಿಇಒ

ಬೆಳ್ತಂಗಡಿ, ಜು.28: ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಗುಳಿ ಎಂಬಲ್ಲಿರುವ ಸರ್ವ ಶಿಕ್ಷಣ ಅಭಿಯಾನದ ಜಿಲ್ಲೆಯ ಏಕೈಕ ನಿರ್ದಿಷ್ಟ ವರ್ಗಗಳ ಮಕ್ಕಳ ವಸತಿ ಶಾಲೆಗೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಹಾಗೂ ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಗುರುವಾರ ಭೇಟಿ ನೀಡಿ ಶಾಲಾ ಕಟ್ಟಡವನ್ನು ವೀಕ್ಷಿಸಿ, ಬಳಿಕ ಮಕ್ಕಳೊಂದಿಗೆ ಭೋಜನ ಸವಿದರು.
ಶಾಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ವಸತಿ ಶಾಲೆಯಲ್ಲಿ 59 ಗಂಡು, 36 ಹೆಣ್ಣು ಮಕ್ಕಳಿದ್ದಾರೆ. ನಾಲ್ಕು ಪೂರ್ಣಕಾಲಿಕ ಶಿಕ್ಷಕರಿರಬೇಕಾದಲ್ಲಿ ಇಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಯೋಜನೆಯಲ್ಲಿ ಒಬ್ಬರು, ವಾರದ ಮೂರು ದಿನ ಒಬ್ಬ ಶಿಕ್ಷರು ಬರುತ್ತಾರೆ. ಅಕೌಟೆಂಟ್, ಕಚೇರಿ ಸಹಾಯಕಿ, ವಾರ್ಡನ್, ಅಡುಗೆ ಸಹಾಯಕಿಯರನ್ನು ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗಿದೆ. ವಾಚ್‌ಮನ್ ಹುದ್ದೆ ಖಾಲಿ ಇದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀಕಾಂತ ಬೇಕಲ್ ವಿವರಿಸಿದರು.
ಶಾಲೆಯಲ್ಲಿ ನೀಡಲಾಗುತ್ತಿರುವ ಊಟ ಹಾಗೂ ಉಪಹಾರದ ಬಗ್ಗೆ ಸಿಇಒ ಹಾಗೂ ಸಹಾಯಕ ಆಯುಕ್ತರು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.
ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿದರು. ಸರಕಾರದಿಂದ ಊಟೋಪಚಾರಕ್ಕಾಗಿ ನೀಡಲಾಗುತ್ತಿರುವ ಅನುದಾನವನ್ನು ಸದುಪಯೋಗಪಡಿಸುವಂತೆ ಸೂಚಿಸಿದರು.
ನಗರ ಪಂಚಾಯತ್ ಅನುದಾನದಿಂದ ಕೆಲವು ಕಾಮಗಾರಿಗಳನ್ನು ಮಾಡಿಸುವಂತೆ ನ.ಪಂ. ಅಧ್ಯಕ್ಷರಿಗೆ ತಿಳಿಸಿದರು. ಶಿಕ್ಷಣ ಇಲಾಖೆಯಿಂದ ಮನವಿ ನೀಡಿದ್ದಲ್ಲಿ ತಕ್ಷಣ ಗಮನಹರಿಸುವುದಾಗಿ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹೇಳಿದರು.
ಈ ಸಂದರ್ಭ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಪಿ., ಸಮನ್ವಯಾಧಿಕಾರಿ ತಾರಾಕೇಸರಿ ಉಪಸ್ಥಿತರಿದ್ದರು.







