ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ನಿಗೂಢ ಆತ್ಮಹತ್ಯೆ ಪ್ರಕರಣ: ಬಜರಂಗದಳ ಖಾಂಡ್ಯ ಸಹಚರರ ಬಂಧನ

ಬೆಂಗಳೂರು, ಜು. 28: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ನಿಗೂಢ ಆತ್ಮಹತ್ಯೆ ಪ್ರಕರಣದ ಪ್ರಮುಖ ರೂವಾರಿ ಬಜರಂಗದಳದ ಪ್ರವೀಣ್ ಖಾಂಡ್ಯನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮೂವರನ್ನು ಸಿಐಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತರನ್ನು ನಗರದ ಹಲಸೂರು ನಿವಾಸಿ ಜೀವನ್‌ರಾಜ್(20), ಗಾಯಿತ್ರಿ ನಗರದ ಲೋಕೇಶ್(21) ಹಾಗೂ ಕೀರ್ತಿ ಯಾನೆ ಬಸವರಾಜು(23) ಎಂದು ಸಿಐಡಿ ಪೊಲೀಸರು ಗುರುತಿಸಿದ್ದಾರೆ. ಆರೋಪಿಗಳಾದ ಜೀವನ್‌ರಾಜ್ ದೇಹದಾರ್ಢ್ಯಪಟು ಆಗಿದ್ದಾನೆ. ಅದೇ ರೀತಿ, ಲೋಕೇಶ್ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಕೀರ್ತಿ ಎಂಬಾತ ವಾಹನ ಚಾಲಕ ವೃತ್ತಿಯಲ್ಲಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಐಡಿ ಸ್ಪಷ್ಟಪಡಿಸಿದೆ.
ಪ್ರಕರಣದ ಪ್ರಮುಖ ರೂವಾರಿ ಬಜರಂಗದಳದ ಪ್ರವೀಣ್‌ಖಾಂಡ್ಯ ಜೊತೆ ಸೇರಿ ಪ್ರಕರಣದ ದೂರುದಾರ ತೇಜಸ್‌ಗೌಡ ಅಪಹರಣ ಮಾಡುವಲ್ಲಿ ಮೂವರು ಆರೋಪಿಗಳು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಯುವಕನ ಅಪಹರಣ ಪ್ರಕರಣ ಸಂಬಂಧ ಬಜರಂಗ ದಳ ರೂಪಿಸಿದ ಸಂಚಿಗೆ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಸವದತ್ತಿ ಸಮೀಪದಲ್ಲಿನ ತಮ್ಮ ಪತ್ನಿ ನಿವಾಸದಲ್ಲಿ ಜು.5ರಂದು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣ ಸಿಐಡಿ ತನಿಖೆ ನಡೆಯುತ್ತಿದ್ದು, ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯ ಸೇರಿ ಇನ್ನಿತರರ ಬಂಧನಕ್ಕೆ ಸಿಐಡಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.





