ಜು.29ರಂದು ಬ್ಯಾಂಕ್ ಮುಷ್ಕರ

ಚೆನ್ನೈ, ಜು.28: ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆಯೊಂದಿಗೆ ಯುಎಫ್‌ಬಿಯು) ಭಾರತೀಯ ಬ್ಯಾಂಕ್‌ಗಳ ಸಂಘಟನೆ(ಐಬಿಎ) ಹಾಗೂ ಕೇಂದ್ರ ಸರಕಾರ ಮಂಗಳವಾರ ನಡೆದ ಮಾತುಕತೆ ವಿಫಲವಾಗಿರುವುದರಿಂದ ನಿರ್ಧರಿಸಿರುವಂತೆಯೇ ಜು.29ರಂದು ಬ್ಯಾಂಕ್ ನೌಕರರ ಮುಷ್ಕರ ನಡೆಯಲಿದೆಯೆಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ(ಎಐಬಿಇಎ) ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ.
ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಸಂಘಟನೆಯ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ಮುಂದಿರಿಸಿದ್ದರು. ಆದರೆ ಐಬಿಎ ಅಥವಾ ಸರಕಾರದ ಪ್ರತಿನಿಧಿಗಳಿಂದ ಯಾವುದೇ ನಿರ್ಧಾರ ಹೊರ ಬಿದ್ದಿಲ್ಲ. ಸರಕಾರದ ನೀತಿಗಳನ್ನು ಹಿಂದೆಗೆಯುವ ಅಥವಾ ವಿಮರ್ಷಿಸುವ ಭರವಸೆಯನ್ನು ಅವರು ನೀಡಿಲ್ಲ. ಬದಲಾಗಿ ಅವುಗಳನ್ನು ಸಮರ್ಥಿಸಿಕೊಂಡಿದ್ದಾರೆಂದು ಎಇಬಿಇಎಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿಕೆಯೊಂದರಲ್ಲಿ ಆರೋಪಿಸಿದ್ದಾರೆ.
ಹೊಸದಿಲ್ಲಿಯ ಕಾರ್ಮಿಕ ಸಚಿವಾಲಯದಲ್ಲಿ ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತರು ಈ ಸಂಧಾನ ಸಭೆಯನ್ನು ಕರೆದಿದ್ದರು. ಯುಎಫ್‌ಬಿಯುದ ಎಲ್ಲಾ 9 ಘಟಕ ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವೆಂದು ವೆಂಕಟಾಚಲಂ ತಿಳಿಸಿದ್ದಾರೆ.
ಅದರಂತೆ, ಸಾರ್ವಜನಿಕ ವಲಯ ಬ್ಯಾಂಕ್‌ಗಳು, ಹಳೆ ತಲೆಮಾರಿನ ಖಾಸಗಿ ಬ್ಯಾಂಕ್‌ಗಳು ಹಾಗೂ ವಿದೇಶಿ ಬ್ಯಾಂಕ್‌ಗಳ ದೇಶಾದ್ಯಂತದ 80 ಸಾವಿರಕ್ಕೂ ಹೆಚ್ಚು ಶಾಖೆಗಳ 10 ಲಕ್ಷ ನೌಕರರು ಹಾಗೂ ಅಧಿಕಾರಿಗಳು , ಈ ಅನಗತ್ಯ ಬ್ಯಾಂಕಿಂಗ್ ಸುಧಾರಣಾ ಕ್ರಮಗಳನ್ನು ವಿರೋಧಿಸಿ 2016ರ ಜು.29ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆಂದು ಅವರು ಹೇಳಿದ್ದಾರೆ.





