ಹಾಜಿಗಳನ್ನು ಸ್ವಾಗತಿಸಲು ಸೌದಿ ಸರಕಾರ , ಇಂಡಿಯನ್ ಹಜ್ ಮಿಷನ್ ಸರ್ವ ಸಜ್ಜು
ಹಜ್ ಸಚಿವರೊಂದಿಗೆ ಭಾರತೀಯ ರಾಯಭಾರಿ ಮಾತುಕತೆ

ಜಿದ್ದಾ, ಜು. 28: ಮಕ್ಕಾದ ಮಸ್ಜಿದುಲ್ ಹರಂ ಮಸೀದಿಯ ಮತಾಫ್ ವಿಸ್ತರಣೆ ಕಾರ್ಯ ಪೂರ್ಣಗೊಂಡಿರುವುದರಿಂದ, ಅಲ್ಲಿನ ನೂತನ ಸೌಲಭ್ಯಗಳ ಸಂಪೂರ್ಣ ಪ್ರಯೋಜನ ಪಡೆಯಲು ಭಾರತೀಯ ಹಜ್ ಯಾತ್ರಿಕರಿಗೆ ಸಾಧ್ಯವಾಗಲಿದೆ ಎಂದು ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವ ಮುಹಮ್ಮದ್ ಬಾಂತನ್ ಹೇಳಿದ್ದಾರೆ.
ಮಕ್ಕಾದಲ್ಲಿರುವ ತನ್ನ ಕಚೇರಿಯಲ್ಲಿ ಬುಧವಾರ ಭಾರತೀಯ ರಾಯಭಾರಿ ಅಹ್ಮದ್ ಜಾವೇದ್‌ರೊಂದಿಗೆ ನಡೆಸಿದ ಸಭೆಯ ವೇಳೆ ಬಾಂತನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಕಾನ್ಸುಲ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಶೇಖ್, ಉಪ ಕಾನ್ಸುಲ್ ಜನರಲ್ ಹಾಗೂ ಹಜ್ ಕಾನ್ಸುಲ್ ಶಾಹಿದ್ ಅಲಂ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲಿ ಉಪಸ್ಥಿತರಿದ್ದರು.
ಭಾರತೀಯ ಹಜ್ ಸಮಿತಿಯು ತನ್ನ ಯಾತ್ರಿಕರಿಗಾಗಿ ಮಾಡಿರುವ ಏರ್ಪಾಡುಗಳನ್ನು ಬಾಂತನ್ ಶ್ಲಾಘಿಸಿದರು.
ಉಭಯ ದೇಶಗಳ ನಡುವಿನ ಸುದೃಢ ಹಾಗೂ ಐತಿಹಾಸಿಕ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
‘‘ಭಾರತೀಯ ಹಜ್ ಸಮಿತಿಯು ತನ್ನ ಯಾತ್ರಿಕರಿಗೆ ನೀಡುತ್ತಿರುವ ಉನ್ನತ ತಂತ್ರಜ್ಞಾನ ಆಧಾರಿತ ಸೇವೆಗಳು ಮತ್ತು ಸೌಲಭ್ಯಗಳನ್ನು ನಾವು ಶ್ಲಾಘಿಸುತ್ತೇವೆ. ವಿಶೇಷವಾಗಿ, ಮಾಹಿತಿ ಪ್ರಸಾರ ಮತ್ತು ವಾಸ ಸ್ಥಳ ಪತ್ತೆ ಕಾರ್ಯದಲ್ಲಿ ಅವರು ಮುನ್ನಡೆ ಸಾಧಿಸಿದ್ದಾರೆ’’ ಎಂದರು.
ಹಜ್‌ಗಾಗಿ ಭಾರತೀಯ ಸಮಿತಿಯು ಮಾಡಿರುವ ವಿಸ್ತೃತ ವ್ಯವಸ್ಥೆಗಳು ಮತ್ತು ತಯಾರಿಗಳ ಬಗ್ಗೆ ಸೌದಿ ಹಜ್ ಮತ್ತು ಉಮ್ರಾ ಸಚಿವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸಭೆಯ ಬಳಿಕ ‘ಸೌದಿ ಗಝೆಟ್’ನೊಂದಿಗೆ ಮಾತನಾಡಿದ ರಹ್ಮಾನ್ ಶೇಖ್ ಮತ್ತು ಅಲಂ ತಿಳಿಸಿದರು.





