ಕೊಡಗು ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ

ಮಡಿಕೇರಿ, ಜು.28: ಕಳಸಾ ಬಂಡೂರಿ ಯೋಜನೆಯಡಿ ಮಹಾದಾಯಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಗೋಣಿಕೊಪ್ಪ ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.
ಹರಿಶ್ಚಂದ್ರಪುರದಿಂದ ಮೆರವಣಿಗೆ ಮೂಲಕ ಪಟ್ಟಣದ ಬಸ್ ನಿಲ್ದಾಣದವರೆಗೆ ಆಗಮಿಸಿದ ರೈತ ಸಂಘದ ಸದಸ್ಯರು ಅನ್ಯಾಯದ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಮಹಾದಾಯಿ ನದಿಯಿಂದ ಅಗತ್ಯ ನೀರು ದೊರಕದಿದ್ದಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ನ್ಯಾಯಾಧಿಕರಣಕ್ಕೆ ಮನವರಿಕೆ ಮಾಡುವಲ್ಲಿ ಸರಕಾರ ಎಡವಿದೆ. ಇದರಿಂದಾಗಿ ಜನತೆ ಸಮಸ್ಯೆಗೆ ಒಳಗಾಗುವಂತಾಗಿದೆ ಎಂದು ಆರೋಪಿಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, ಸೂಕ್ತ ಸಾಕ್ಷ ನೀಡದ ಕಾರಣ ತೀರ್ಪು ನಮ್ಮ ವಿರುದ್ಧ ಬಂದಿದೆ. ಇದರಿಂದಾಗಿ ಸರಕಾರ ಜನರ ಹಿತಾಸಕ್ತಿ ಕಾಪಾಡುವಲ್ಲಿ ಎಡವಿದೆ ಎಂದರು.
ರೈತ ಸಂಘದ ಕಾರ್ಯದರ್ಶಿ ಕಳ್ಳಿಚಂಡ ಧನು, ಸಂಚಾಲಕ ಚಿಮ್ಮಂಗಡ ಗಣೇಶ್ ಮತ್ತು ರೈತ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಖಂಡನೆ:
ಮಹಾದಾಯಿ ನದಿ ನೀರು ಒದಗಿಸುವಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸುವುದಾಗಿ ರಕ್ಷಣಾ ವೇದಿಕೆ ಪೊನ್ನಂಪೇಟೆ ಹೋಬಳಿ ತಿಳಿಸಿದ್ದು, ಕನ್ನಡದ ನೆಲ, ಜಲ ರಕ್ಷಣೆಗೆ ಮುಂದಾಗಿರುವ ರೈತರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೋಬಳಿ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.







