‘ಆತ್ಮವಿಶ್ವಾಸ ಹೆಚ್ಚಿಸಲು ರಿವರ್ ರ್ಯಾಪ್ಟಿಂಗ್ ಕ್ರೀಡೆ ಸಹಕಾರಿ’
ಉಚಿತ ಜಲಸಾಹಸ ಕ್ರೀಡಾ ತರಬೇತಿ ಶಿಬಿರ

ಚಿಕ್ಕಮಗಳೂರು, ಜು.28: ಪೊಲೀಸರಿಗೆ ಆತ್ಮವಿಶ್ವಾಸದ ಜೊತೆ ಮುಂದಿನ ವೃತ್ತಿ ಜೀವನಕ್ಕೂ ಜಲಸಾಹಸ ಕ್ರೀಡೆಗಳು ಸಹಕಾರಿಯಾಗುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಚಿಕ್ಕ ಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷೆ ನಳಿನಾ ಡೀಸಾ ತಿಳಿಸಿದ್ದಾರೆ.
ಅವರು ಮಾಗುಂಡಿ ಬಳಿ ಬಾಳೆಹೊಳೆಯಲ್ಲಿ ಪೊಲೀಸ್ ತರಬೇತಿ ಶಿಬಿರಾರ್ಥಿಗಳು ಹಾಗೂ ಪ್ರೊಬೇಷನರಿ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಚಿಕ್ಕಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕ್ಯಾಪ್ಚರ್ ದಿ ಮೂಮೆಂಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಭದ್ರಾನದಿ ಜಲಸಾಹಸ ಕ್ರೀಡಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ಹುಟ್ಟು ಹಾಕಿದ್ದೆ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಫುಲ್‌ಕುಮಾರ್‌ರವರು. ಅಂದಿನಿಂದ ಆರಂಭವಾದ ಈ ಸಂಸ್ಥೆ ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಇರುವ ಯುವ ಸಮೂಹಕ್ಕೆ ಪ್ಯಾರಾಸೈಲರ್,ಟ್ರಕ್ಕಿಂಗ್ ಸೇರಿದಂತೆ ಗಿರಿ ಶ್ರೇಣಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡುವ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದೇವೆ ಎಂದರು.
ಇನ್‌ಸ್ಪೆಕ್ಟರ್ ಪಾಲಾಕ್ಷಪ್ಪ ಮಾತನಾಡಿ, ಪೊಲೀಸರು ತರಬೇತಿ ಪಡೆಯುವ ಸಂದರ್ಭ ಇಂತಹ ಕಾರ್ಯ ಕ್ರಮಗಳು ಅತ್ಯಗತ್ಯವಾಗಿದ್ದು, ಒಂದು ತಂಡವಾಗಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಸಾಹಸ ಕ್ರೀಡೆಗಳಲ್ಲಿ ತೊಡಗಿ ಮುಂದಿನ ವೃತ್ತಿ ಜೀವನದಲ್ಲಿ ಇದು ಸಹಕಾರಿಯಾಗಲಿದೆ ಎಂದರು.
ಕೃಷ್ಣ, ದಿನೇಶ್, ಸಂತೋಷ್ ಸಾಹಸ ಕ್ರೀಡೆಗಳ ಬಗ್ಗೆ ತರಬೇತಿ ನೀಡಿದರು.
ಈ ಸಂದರ್ಭ ಜಿಪಂ ಸದಸ್ಯ ಪ್ರಭಾಕರ್, ತಾಪಂ ಸದಸ್ಯ ರಾಜೇಂದ್ರ ಹೆಬ್ಬಾರ್, ಶ್ರೀನಿವಾಸ್ ,ಅಡ್ವೆಂಚರ್ ಸ್ಪೋರ್ಟ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಕಿಶನ್‌ಗೌಡ, ಕೃಷ್ಣ,ಗಿರೀಶ್, ವಿವೇಕ್,ಸಹನಾ ರೂಬಿನ್ ಇತರರು ಉಪಸ್ಥಿತರಿದ್ದರು.







