ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಅಂಗನವಾಡಿ ಕಾರ್ಯಕರ್ತೆಯರ ಧರಣಿ
.jpg)
ಸಾಗರ,ಜು.28: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ, ಸರಕಾರಗಳು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಮಹಿಳಾ ಸಬಲೀಕರಣ ಕುರಿತು ಭಾಷಣ ಮಾಡುವುದಕ್ಕಿಂತ ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಆಳುವ ಸರಕಾರ ಚಿಂತನೆ ನಡೆಸಬೇಕು ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರು ಕನಿಷ್ಠ ವೇತನಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಗ ಕೊಡುತ್ತಿರುವ ಗೌರವ ಧನದಲ್ಲಿ ಮಹಿಳೆಯರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕನಿಷ್ಠ 15ಸಾವಿರ ರೂ. ವೇತನವನ್ನು ನೀಡುವ ಬಗ್ಗೆ ಸರಕಾರ ಗಮನಹರಿಸಬೇಕು. ಮಹಿಳಾ ಸಬಲೀಕರಣದ ಬಗ್ಗೆ ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ವೇತನ ಹೆಚ್ಚುವರಿ ಮಾಡಲು ಸರಕಾರ ಸತಾಯಿಸುತ್ತಿರುವುದು ಶೋಷಣೆಯ ಮತ್ತೊಂದು ಭಾಗವಾಗಿದೆ ಎಂದು ದೂರಿದರು. ಫೆಡರೇಶನ್ ರಾಜ್ಯ ಸಂಚಾಲಕ ಎನ್.ರವೀಂದ್ರ ಸಾಗರ್ ಮಾತನಾಡಿ, ಐಸಿಡಿಎಸ್ ಯೋಜನೆ ಜಾರಿಗೆ ಬಂದು 40 ವರ್ಷಗಳಾಗಿವೆೆ. ಆದರೆ ಕಾರ್ಯಕರ್ತೆಯರ ಹಾಗೂ ಸಹಾಯಕಿಯರನ್ನು ಸರಕಾರಿ ನೌಕರರು ಎಂದು ಪರಿಗಣಿಸದೆ ಇರುವ ಕ್ರಮ ಖಂಡನೀಯ. ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ 18ಸಾವಿರ ರೂ.ವೇತನ ನೀಡಬೇಕು. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ತರಗತಿ ತೆರೆಯುವ ಬದಲು ಅಂಗನವಾಡಿಗಳಲ್ಲೇ ಇಂಗ್ಲಿಷ್ ಕಲಿಸಲು ಅಗತ್ಯವಾದ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗನವಾಡಿ ನೌಕರರಿಗೆ ಸೇವಾ ಹಿರಿತನದ ಆಧಾರದ ಮೇಲೆ ಗೌರವಧನ ಹೆಚ್ಚಿಸಬೇಕು. ಅಂಗನವಾಡಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಬಿಡಬೇಕು. ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಸಾರಿಗೆ ಹಾಗೂ ತುಟ್ಟಿಭತ್ತೆಯನ್ನು ಹೆಚ್ಚಳ ಮಾಡಬೇಕು. ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಮೂರು ಜೊತೆ ಸಮವಸ್ತ್ರವನ್ನು ಪ್ರತಿವರ್ಷ ನೀಡಬೇಕು. ಖಾಲಿ ಇರುವ ಹುದ್ದೆಯನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಅಶೋಕ್ ಬರದವಳ್ಳಿ, ಫೆಡರೇಶನ್ ತಾಲೂಕು ಅಧ್ಯಕ್ಷೆ ಭಾರತಿ ಎಚ್.ನಾಯಕ್, ಕಾರ್ಯದರ್ಶಿ ಸಾವಿತ್ರಿ ಚಕ್ಕೋಡು, ಜಿಲ್ಲಾ ಪ್ರತಿನಿಧಿ ರೇಖಾ, ಆಶಾರಾಣಿ, ಝುಬೇದ, ಮಂಜುಳಾ, ಸರೋಜ ಗುಡ್ಡೆಕೌತಿ, ಎಂ.ಆರ್.ಕೋಮಲಾಕ್ಷಿ, ಗಿರಿಜಮ್ಮ, ಮಾಸ್ತ್ಯಮ್ಮ, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.







